ದೆಹಲಿ: ಮಾರಣಾಂತಿಕ ಕೊರೋನಾ ಇದೀಹ ಜಗ್ಗತ್ತಿನಾದ್ಯಂತ ಮಾರಣಹೋಮವನ್ನೇ ನಡೆಸುತ್ತಿದೆ. ದಿನೇದಿನೇ ಸೋಂಕಿತರ ಸಂಖ್ಯೆಯಲ್ಲಷ್ಟೇ ಅಲ್ಲ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಲಿವೆ. ಚೀನಾದಲ್ಲಿ ಹುಟ್ಟಿ ತನ್ನ ಕಬಂಧ ಬಾಹುವನ್ನು ಚಾಚುತ್ತಿತುವ ಈ ಹೆಮ್ಮಾರಿ ಕೋವಿಡ್-19 ಪ್ರಸ್ತುತ ಅಮೆರಿಕಾ, ಇಟಲಿ, ಸ್ಪೇನ್, ಫ್ರಾನ್ಸ್ ಮೊದಲಾದ ದೇಶಗಳಲ್ಲಿ ತಾಂಡವವಾಡುತ್ತಿದೆ.
ಇಟಲಿಯಲ್ಲಿ ಮರಣ ಮೃದಂಗ ಭಾರಿಸಿ ಇಡೀ ದೇಶವನ್ನು ಸ್ಮಶಾನವನ್ನಾಗಿಸಿರುವ ಈ ವೈರಾಣು, ಜಗತ್ತಿನಾದ್ಯಂತ 24 ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಚೀನಾದಲ್ಲೀಗ ಸಾವಿನ ಸಂಖ್ಯೆ ವರದಿಯಾಗುತ್ತಿಲ್ಲ. ಆದರೆ ಚೀನಾದಿಂದ ಇಟಲಿಗೆ ಹರಡಿದ ಕೊರೋನಾ 8,215 ಮಂದಿಯನ್ನು ಬಲಿ ಪಡೆದಿದೆ. ಸ್ಪೇನ್ನಲ್ಲಿ ಗುರುವಾರ ಒಂದೇ ದಿನದಲ್ಲಿ ಸುಮಾರು 650 ಜನ ಸಾವಿಗೀಡಾಗಿದ್ದು , ಅಲ್ಲಿ ಕೊರೋನಾದಿಂದ ಮರಣವನ್ನಪ್ಪಿದವರ ಸಂಖ್ಯೆ 4,365ಕ್ಕೆ ಏರಿಕೆಯಾಗಿದೆ.
ಇರಾನ್ ನಲ್ಲಿ 2,234 ಮಂದಿ ಈವರೆಗೆ ಸಾವಿಗೀಡಾದರೆ, ಫ್ರಾನ್ಸ್ ನಲ್ಲಿ 1,696 ಹಾಗೂ ಅಮೇರಿಕಾದಲ್ಲಿ 1,300 ಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೊಳಗಾಗಿ ಬಲಿಯಾಗಿದ್ದಾರೆ.
ಈ ನಡುವೆ ಅಮೆರಿಕಾದಲ್ಲಿ ಗುರುವಾರ ಒಂದೇ ದಿನದಲ್ಲಿ ಸುಮಾರು 10,000 ಸಾವಿರ ಜನರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಜಗತ್ತಿನಾದ್ಯಂತ 5,32,225ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದ್ದು ಕ್ಷಣಕ್ಷಣಕ್ಕೋ ಆತಂಕ ಹೆಚ್ಚಾಗುತ್ತಿದೆ. ಈ ಕೊರೋನಾ ಹಾವಳಿ ನಿಯಂತ್ರಣ ಸಂಬಂಧ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ.