ಬೆಂಗಳೂರು: ಸಾರಿಗೆ ಸಂಸ್ಥೆಯ ನೌಕರರ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಮಸ್ಯೆ ಬಗೆಹರಿಸಲು ಹರಸಾಹಸ ನಡೆಸುತ್ತಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಾರಿಗೆ ಸಂಸ್ಥೆಯ ನೌಕರರ ಒಕ್ಕೂಟಗಳ ಮುಖಂಡರ ಜೊತೆ ನಡೆಸಿದ ಸಭೆ ಗಮನಸೆಳೆಯಿತು.
ಸಾರಿಗೆ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಅವರ ಬೇಡಿಕೆಗಳ ಬಗ್ಗೆ ಈಗಾಗಲೇ ಒಕ್ಕೂಟಗಳ ಮುಖಂಡರ ಒಂದು ಸುತ್ತಿನ ಸಭೆ ನಡೆಸಲಾಯಿತು. ಅಗತ್ಯವಿದ್ದರೆ ಮತ್ತಷ್ಟು ಮಾತುಕತೆಗಳನ್ನು ನಡೆಸಿ ಸಂಧಾನ ಮಾರ್ಗದಲ್ಲಿ ಸಮಸ್ಯೆ ಪರಿಹರಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆ ಎಂದರು.
ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬಗ್ಗೆ ಪರಿಶೀಲಿಸಲು ಸನ್ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಒಕ್ಕೂಟದ ಮುಖಂಡರುಗಳ ಸಭೆಯನ್ನು ಏರ್ಪಡಿಸಿ ಶೀಘ್ರವೇ ಮುಂದಿನ ಮಾರ್ಗೋಪಾಯಗಳನ್ನು ನಿರೂಪಿಸಲಾಗುವುದು ಎಂದರು.
ಕೋವಿಡ್‍ನಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗಾಗಿ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದುಎಂದ ಲಕ್ಷ್ಮಣ್ ಸವದಿ, ಸಿಬ್ಬಂದಿಗಳಿಗೆ ಕೆಲಸಗಳನ್ನು ವಿಂಗಡಿಸುವಾಗ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಒಕ್ಕೂಟದ ಮುಖಂಡರು ಗಮನ ಸೆಳೆದಿದ್ದಾರೆ. ಆದ್ದರಿಂದ ಈ ರೀತಿಯ ಕಿರುಕುಳ ನೀಡುವ ಘಟನೆಗಳು ಮುಂದೆ ನಡೆದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರಿಗೆ ಸಿಬ್ಬಂದಿ ಬಗ್ಗೆ ನನಗೆ ಮತ್ತು ನಮ್ಮ ಸರ್ಕಾರಕ್ಕೆ ಯಾವತ್ತೂ ಸಹಾನುಭೂತಿ ಇದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿಯೂ ಸಹ ಎಲ್ಲಾ ಸಿಬ್ಬಂದಿಗಳಿಗೆ ಯಾವುದೇ ಕಡಿತವಿಲ್ಲದೇ ಸಂಬಳ ನೀಡಿದ್ದು ಇದಕ್ಕೆ ನಿದರ್ಶನವಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಸಹ ಸಾರಿಗೆ ಸಿಬ್ಬಂದಿಗಳ ಸಂಬಳ ನೀಡಿಕೆಯ ಬಗ್ಗೆ ಅತ್ಯಂತ ಉದಾರವಾಗಿ ಬೇಡಿಕೆಗೆ ಸ್ಪಂದಿಸಿದ್ದನ್ನು ನಾನು ಸ್ಮರಿಸುತ್ತೇನೆ ಎಂದರು.