ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕ ರಾಜೀವ್ ಬೀರಸಾಲ ಎಂಬವರು ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ.
56 ವರ್ಷ ವಯಸ್ಸಿನ ರಾಜೀವ್ ಬೀರಸಾಲ ಅವರು KSRTC ಬಸ್ಸಿನಲ್ಲಿ ಚಾಲಕ- ಕಂ-ನಿರ್ವಾಹಕ ಹುದ್ದೆಯಲ್ಲಿದ್ದರು. ಇವರು ಹರಿಹರ ಘಟಕದ ‘ರಾಜಹಂಸ’ ಬಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು – ದಾವಣಗೆರೆ ಮಾರ್ಗದಲ್ಲಿ ಕಾರ್ಯಚರಣೆಯಲ್ಲಿದ್ದಾಗ ನೆಲಮಂಗಲ ಟೋಲ್ ಹತ್ತಿರ ವಾಹನ ಚಾಲನೆ ಮಾಡುತ್ತಿದ್ದಾಗ ರಾಜೀವ್ ಬೀರಸಾಲ ಅವರಿಗೆ ಹೃದಯಾಘಾತವಾಗಿದೆ. ಆದರೂ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ಪಕ್ಕಕ್ಕೆ ನಿಲ್ಲಿಸಿ, ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಪ್ರಯಾಣಿಕರ ಜೀವದ ಬಗ್ಗೆ ಕಾಳಜಿ ತೋರಿದ ಈ ಚಾಲಕ ನೆಲಮಂಗಲ ಆಸ್ಪತ್ರೆಯಲ್ಲಿ ಮರಣ ಕೊನೆಯುಸಿರೆಳೆದಿದ್ದಾರೆ.
ಚಾಲಕನ ಅಕಾಲಿಕ ನಿಧಾನ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಚಾಲಕರ ಆತ್ಮಕ್ಕೆ ಶಾಂತಿ ಕೋರಿರುವ ಅವರು, ಮೃತನ ಕುಟುಂಬದವರಿಗೆ ಸಾಂತ್ವನ ತಿಳಿಸಿ, ಅತೀ ಶೀಘ್ರದಲ್ಲಿಯೇ ಎಲ್ಲಾ ರೀತಿಯ ಆರ್ಥಿಕ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದ್ದಾರೆ. ಹಾಗೂ ಇವರ ಅವಲಂಬಿತರಿಗೆ ನೌಕರಿಯನ್ನು ಕೂಡಲೇ ನೀಡುವಂತೆ KSRTC ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
