ವರ್ಗಾವಣೆಗಾಗಿ ಅಧಿಕಾರಿಗಳ ನಕಲಿ ಸಹಿ; KSRTC ನೌಕರ ಅಮಾನತು

ಬೆಂಗಳೂರು: ನಕಲಿ ಸಹಿ‌ ಮಾಡಿ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಬ್ಬಂದಿಯೊಬ್ಬರನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಆಡಳಿತ ಮಂಡಳಿ ಅಮಾನತು ಮಾಡಿದೆ. ನಿಗಮದ‌ ಸಿಬ್ಬಂದಿಯೊಬ್ಬರು ನಕಲಿ ಸಹಿ‌ ಮಾಡಿ ವಂಚನೆ ಮಾಡಿರುವ ವಿಷಯವು ಸಾರಿಗೆ ಹಾಗೂ ಮುಜರಾಯಿ ಸಚಿವರ ಗಮನಕ್ಕೆ ಬಂದ ಕೂಡಲೇ ವಿಚಾರಣೆ ನಡೆಸಲು ಸೂಚಿಸಿ ಸೂಕ್ತ ಶಿಸ್ತಿನ ಕ್ರಮ ತೆಗದುಕೊಳ್ಳಲು ನಿರ್ದೇಶಿಸಿದ್ದು, ಅದರಂತೆ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಯಲ್ಲಿ ಇಂದು ಸದರಿಯವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

KSRTC ಕೇಂದ್ರ ಕಚೇರಿಯ ಲೆಕ್ಕಪತ್ರ ವಿಭಾಗದ ಕಿ-ಸ-ಕಂ-ಡಾ-ಎ-ಆಪರೇಟರ್ ರಿಚರ್ಡ್ ಜೆಎಂಬವರು, ಸಂಸ್ಥೆಯ ಸಿಬ್ಬಂದಿಯಾದ ನಾಗರಾಜಪ್ಪ, ಸಹಾಯಕ ಕುಶಲಕರ್ಮಿ, ಶಿವಮೊಗ್ಗ ಘಟಕ ರವರನ್ನು ಅವರ ಕೋರಿಕೆಯಂತೆ ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಅವರಿಂದ, ವಜಾಗೊಂಡ ಚಾಲಕರಾದ ನಾಗರಾಜ ಎನ್.ಎ ರವರನ್ನು ಪುನರ್ ನೇಮಕ ಮಾಡಿಸುವುದಾಗಿ ಮತ್ತು ಅವರ ಸ್ನೇಹಿತ ಕುಂದಾಪುರ ಘಟಕದ ಚಾಲಕ ಚಂದ್ರಹಾಸ ಎಸ್ ಆಚಾರಿ ಅವರನ್ನು ಶಿವಮೊಗ್ಗ ವಿಭಾಗಕ್ಕೆ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಹಣಪಡೆದಿದ್ದರೆ ಎನ್ನಲಾಗಿದೆ. ನಕಲಿ ವರ್ಗಾವಣೆ ಮತ್ತು ಪುನರ್ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ, ಆ ಆದೇಶಗಳ ಮೇಲೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಾದ ಮುಖ್ಯ ಯಾಂತ್ರಿಕ ಅಭಿಯಂತರರು, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ) ಮತ್ತು ನಿಕಟ ಪೂರ್ವ ವ್ಯವಸ್ಥಾಪಕ ನಿರ್ದೇಶಕ ರವರುಗಳ ಸಹಿಗಳನ್ನು ಸ್ಕ್ಯಾನ್ ಮಾಡಿ, ನಕಲಿ ಆದೇಶಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ಸಂಸ್ಥೆಯ ಹಿರಿಯ ಅಧಿಕಾರಿಗಳ ನಕಲಿ ಸಹಿಯನ್ನು ಬಳಸಿ ಬೋಗಸ್ ಆದೇಶಗಳನ್ನು ಸೃಷ್ಟಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಈ ಸಿಬ್ಬಂದಿಯನ್ನು ದುರ್ನಡತೆ ಆರೋಪದಲ್ಲಿ ಕರ್ತವ್ಯದಿಂದ ಅಮಾನತ್ತು ಮಾಡಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Related posts