ಬೆಂಗಳೂರು: ಸಾಲು ಸಾಲು ಪುರಸ್ಕಾರಗಳ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದೀಗ ಮತ್ತೊಂದು ಪ್ರಶಸ್ತಿ ಮೂಲಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ. ದೇಶದ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ತನ್ನ ಸಿಬ್ಬಂದಿಗಾಗಿ KSRTC ಜಾರಿ ಮಾಡಿದ ವಿನೂತನ ರೂ.1 ಕೋಟಿ ಸಾರಿಗೆ ಸುರಕ್ಷಾ ವಿಮಾ ಯೋಜನೆಗೆ ಪ್ರತಿಷ್ಠಿತ SKOCH ರಾಷ್ಟ್ರೀಯ ಪ್ರಶಸ್ತಿ- 2023 ಲಭಿಸಿದೆ.
18.11.2023ರಂದು ನವದೆಹಲಿಯ ಕಾನ್ಸಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ KSRTCಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ದೆಹಲಿ ಮೂಲದ ಸ್ಕ್ವಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು,ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ.
SKOCH India ಸಂಸ್ಥೆ, ಆಯೋಜಿಸಿದ 95ನೇ SKOCH SUMMIT, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ಕಾಚ್ ಗ್ರೂಪ್ ಅಧ್ಯಕ್ಷ ಸಮೀರ್ ಕೊಚ್ಚರ್ ಅವರು KSRTC ನಿಗಮವು ತನ್ನ ಸಿಬ್ಬಂದಿಗಾಗಿ ಜಾರಿ ಮಾಡಿದ ವಿನೂತನ ರೂ.1 ಕೋಟಿ ಸಾರಿಗೆ ಸುರಕ್ಷಾ ವಿಮಾ ಯೋಜನೆಗೆ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಭಾಗಿಯಾದ KSRTCಯ ಮುಖ್ಯ ತಾಂತ್ರಿಕ ಶಿಲ್ಪಿ ಎನ್.ಕೆ. ಬಸವರಾಜು, ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಶ್ರೀನಿವಾಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ನಿಗಮವು ಈ ಯೋಜನೆ ಅಡಿ ಇದುವರೆಗೂ ತನ್ನ 9 ಸಿಬ್ಬಂದಿಯ ಅವಲಂಭಿತರಿಗೆ ತಲಾ ರೂ 1 ಕೋಟಿಯ ಅಪಘಾತ ವಿಮಾ ಪರಿಹಾರ ಚೆಕ್ ವಿತರಿಸಿರುವುದು ಗಮನಾರ್ಹ.