ನೆಲ ಜಲ ಭಾಷೆ ರಕ್ಷಣೆಗಾಗಿ ‘ಜಲ ಸಂರಕ್ಷಣಾ ಸಮಿತಿ’ ಅಸ್ಥಿತ್ವಕ್ಕೆ; ಕುರುಬೂರು ಸೈನ್ಯದಿಂದ ಕಾವೇರಿ ರಣಕಹಳೆ 

ಬೆಂಗಳೂರು: ರಾಜ್ಯದ ನೆಲ ಜಲ ಭಾಷೆ ರಕ್ಷಣೆಗಾಗಿ ಕರ್ನಾಟಕ ‘ಜಲ ಸಂರಕ್ಷಣಾ ಸಮಿತಿ’ ಅಸ್ಥಿತ್ವಕ್ಕೆ ಬಂದಿದೆ. ರಾಜಕೀಯೇತರ ಸಂಘಟನೆಯಾಗಿರುವ ಈ ಸಮಿತಿಯು ಕಾವೇರಿ, ಕೃಷ್ಣ, ಮಹಾದಾಯಿ ನದಿ ,ನೀರಿನ ರಕ್ಷಣೆಗಾಗಿ ಹೋರಾಟ ಮಾಡಲು ತೀರ್ಮಾನಿಸಿದೆ. ಈಗ ಕಾವೇರಿ ನೀರಿನ ಬಗ್ಗೆ ಸರ್ಕಾರ ನಾಟಕೀಯ ಧೋರಣೆ ಅನುಸರಿಸುತ್ತಿರುವುದರ ವಿರುದ್ದ ರಣಕಹಳೆ ಮೊಳಗಿಸಲಿದೆ ಎಂದು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಕುರುಬೂರು ಶಾಂತಕುಮಾರ್, ಮುಖ್ಯಮಂತ್ರಿ ಚಂದ್ರು ಸಹಿತ ಕನ್ನಡಪರ ಸಂಘಟನೆಗಳ ಮುಖಂಡರು ಸಭೆ ನಡೆಸಿ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ನೋವು ವ್ಯಕ್ತಪಡಿಸಿದರು. ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ 28 ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು  ರಾಜ್ಯದ ನೆಲ ಜಲ ಭಾಷೆ ರಕ್ಷಣೆಗಾಗಿ ಕರ್ನಾಟಕ ‘ಜಲ ಸಂರಕ್ಷಣಾ ಸಮಿತಿ’ ಅಸ್ಥಿತ್ವಕ್ಕ ತಂದಿದ್ದಾಗಿ ಹೇಳಿದ ಮುಖಂಡರು, ಕಾವೇರಿಗಾಗಿ ಹೋರಾಟ ನಡೆಸುವ ಸಂಕಲ್ಪ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್,  ರಾಜ್ಯದಲ್ಲಿ ಶೇಕಡ 64% ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. KRS  100 ಅಡಿಗೆ ಬಂದಿದೆ. ಕಬಿನಿ 72 ಅಡಿಗೆ ಇಳಿದಿದೆ. ಕುಡಿಯೋ ನೀರಿಗೂ ಸಂಕಷ್ಟ ಪಡುವಂತಾಗಿದೆ ಎಂದು ರಾಜ್ಯದ ಪರಿಸ್ಥಿತಿ ಬಗ್ಗೆ ಗಮನಸೆಳೆದರು.

ಯಾವುದೇ ಕಾರಣಕ್ಕೂ ನೀರು ನಿರ್ವಹಣ ಮಂಡಳಿ ಆದೇಶ ಪಾಲಿಸಬಾರದು. ನೀರು ಬಿಡಬಾರದು ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಪುನರ್ ಪರಿಶೀಲನ ಮನವಿ ಸಲ್ಲಿಸಲಿ. ನೀರು ಬಿಡಲು ಸಾಧ್ಯವಿಲ್ಲ ಎಂದು ಕಡಾ ಖಂಡಿತವಾಗಿ ಹೇಳಲಿ. ಕದ್ದು ಮುಚ್ಚಿ ನೀರು ಬಿಟ್ಟು ಬಿಟ್ಟು ರಾಜ್ಯದ ರೈತರನ್ನು ನಾಶ ಮಾಡಬಾರದು. ರಾಜ್ಯದ ಲೋಕಸಭಾ ಸದಸ್ಯರು ಧ್ವನಿಯತ್ತಬೇಕು ಕೇಂದ್ರ ಸರ್ಕಾರಕ್ಕೆ ರಾಜ್ಯದ ಕೂಗು ತಲುಪಬೇಕು ಎಂದವರು ಅಭಿಪ್ರಾಯ ವಂಡಿಸಿದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕೇಂದ್ರ ಸರ್ಕಾರ ಸಂಕಷ್ಟ ಸೂತ್ರ ರಚನೆ ಮಾಡದೆ ಇರುವುದು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆಯನ್ನು ಮಾಡುತ್ತದೆ. ಆದರೆ ರೈತರನ್ನು ಕನ್ನಡ ಪರ ಸಂಘಟನೆಗಳನ್ನ ದೂರ ಇಟ್ಟು ನಾಟಕೀಯ ಸಭೆ ನಡೆಸಿದೆ ಇವರಿಂದ ನ್ಯಾಯ ಸಿಗುವುದು ಅನುಮಾನ ಬರಿಸುತ್ತಿದೆ ಎಂದರು.

ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ತಿಮ್ಮೇಗೌಡ ಮಾತನಾಡಿ, ತಮಿಳುನಾಡಿನ ಪರಿಸರಕ್ಕೆ ಹತ್ತು ಟಿಎಂಸಿ ನೀರು ಮೀಸಲಿಟ್ಟಿದ್ದಾರೆ. ಆದರೆ ಅಲ್ಲಿನ ಅಂತರ್ಜಲ ಪರಿಗಣನೆ ಮಾಡಿಲ್ಲ. ಅದು ರಾಜ್ಯಕ್ಕೆ ಅನ್ಯಾಯ. ಕಬಿನಿ ಹೇಮಾವತಿ ಹಾರಂಗಿ ಜಲಾಶಯಗಳ ನಿರ್ಮಾಣದ ಸಂದರ್ಭ ಕೇಂದ್ರದ ಅನುಮತಿಯನ್ನು ಪಡೆದಿರಲಿಲ್ಲ. ಅದೇ ರೀತಿ ಮೇಕೆದಾಟು ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದರು.

ಕಾವೇರಿ ನೀರಾವರಿ ನಿಗಮದ ನಿವೃತ ಕಾನೂನು ಪರಿಣಿತ ಕ್ಯಾಪ್ಟನ್ ರಾಜರಾವ್ ಮಾತನಾಡಿ, ಕಾವೇರಿ ವಿಚಾರದಲ್ಲಿ ನ್ಯಾಯಾಂಗದ ವಿಳಂಬ ನೀತಿಯಿಂದ ಹಾಗೂ ಸೌತ್ ವೆಸ್ಟ್ ,ನಾರ್ತ್ ವೆಸ್ಟ್, ಮಳೆ ಪ್ರಮಾಣವನ್ನು ಸಮರ್ಪಕವಾಗಿ ಲೆಕ್ಕ ಆಗದೇ ಇರುವುದು, ತಮಿಳುನಾಡಿನ ಅಂತರ್ಜಲ ಪರಿಗಣನೆ ಮಾಡದೆ ಇರುವುದು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.

ಕಾವೇರಿ ಹಿತ ರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್, ಕೃಷಿ ಅರ್ಥಶಾಸ್ತ್ರಜ್ಞ ಪ್ರಕಾಶ್ ಕಮರಡಿ, ನೀರಾವರಿ ಹೋರಾಟ ಸಮಿತಿ ಆಂಜನೇಯ ರೆಡ್ಡಿ, ನಿವೃತ್ತ ಪೊಲೀಸ್ ಅಧಿಕಾರಿ ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕಾನೂನು ಸಲಹೆಗಾರ ಬ್ರಿಜಸ್ ಕಾಳಪ್ಪ, ಕುಮಾರಸ್ವಾಮಿ, ಮಹೇಶ್, ಕ್ಯಾಪ್ಟನ್ ರಾಜಾರಾವ್, ಸಹಿತ 28 ಸಂಘ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಮಾತನಾಡಿದರು.

ಇದೇ ವೇಳೆ, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು: 

  1. ರಾಜ್ಯದ ಕಾವೇರಿ ಜಲಾಶಯದಲ್ಲಿ ಈಗಾಗಲೇ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ದ್ರೋಹ ಬಗೆದಿರುವ ಸರ್ಕಾರದ ವರ್ತನೆ ಸಂಪೂರ್ಣವಾಗಿ ಖಂಡಿಸುತ್ತದೆ.

  2. ಕಾವೇರಿ ನೀರಿನ ನಿರ್ವಹಣಾ ಮಂಡಳಿ ಆದೇಶಿಸಿರುವ 5000 ಕ್ಯೂ ಸೆಕ್ಸ್ ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಕದ್ದು ಮುಚ್ಚಿ ನೀರು ಬಿಡಲು ಹೊರಟರೆ ತಕ್ಷಣವೇ ರಸ್ತೆಗಿಳಿದು ಪ್ರತಿಭಟನೆ ನಡೆಸಲು ಸಮಿತಿ ತೀರ್ಮಾನಿಸಿ ರೈತರಿಗೆ ಕರೆ ನೀಡಿದೆ

  3.  ಮೇಕೆದಾಟು ಜಲಾಶಯ ನಿರ್ಮಾಣ ಕೂಡಲೆ ಕೈಗೆತ್ತಿಕೊಳ್ಳುವುದು

  4. ಸಮುದ್ರಕ್ಕೆ ಅರಿಯುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಕೊಂಡು ಸಂಕಷ್ಟ ಸಮಯದಲ್ಲಿ ಕುಡಿಯುವ ನೀರಿಗೆ ಬಳಸಲು ಒತ್ತಾಯಿಸಲಾಯಿತು

  5. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಬೆಂಗಳೂರಿಗೆ ನಿಗದಿ ಮಾಡಿರುವ ಕುಡಿಯುವ ನೀರಿನ ಪ್ರಮಾಣವನ್ನು ಈಗ ಜನಸಂಖ್ಯೆ ಏರಿಕೆಯಾಗಿರುವ ಕಾರಣ 30 ಟಿಎಂಸಿ ನಿಗದಿ ಪಡಿಸಲು ಸರ್ವೋತ್ತಮ ನ್ಯಾಯಾಲಯಕ್ಕೆ ಮನವಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.

  6. ಮಳೆ ಕಡಿಮೆ ಬಂದ ವರ್ಷ ನೀರು ಬಿಡುವ ಪ್ರಮಾಣ ಸಂಕಷ್ಟ ಸೂತ್ರ ಕೇಂದ್ರ ಸರ್ಕಾರ ತಕ್ಷಣವೇ ಜಾರಿ ಮಾಡಬೇಕು ಎಂದು ಸಭೆ ಸರ್ಕಾರವನ್ನು ಒತ್ತಾಯಿಸಿದೆ.

  7. ಕಾವೇರಿ ನೀರು ಪ್ರಾಧಿಕಾರ ಸ್ವಾಯತ್ತತೆ ಪ್ರಾಧಿಕಾರವನ್ನು ರಚಿಸಬೇಕು. ಕಾವೇರಿ ಕೊಳ್ಳದ ಎಲ್ಲಾ ವಾರಸುದಾರರನ್ನು ಒಳಗೊಂಡ ಪ್ರಾಧಿಕಾರ ಶೀಘ್ರ ರಚನೆಯಾಗಬೇಕು ಅದರ ಮುಖೇನ ತೀರ್ಮಾನವಾಗಬೇಕು. .

Related posts