ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ; ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು ಈ ನಮಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹಾಗೂ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದರು.

ಮಹಾಭಾರತದಲ್ಲಿ ಬಕಾಸುರನಿಗೆ ಎಷ್ಟು ಕೊಟ್ಟರೂ ತಿನ್ನುತ್ತಿದ್ದನಂತೆ. ಅದೇ ರೀತಿ ಈ 40% ಸರ್ಕಾರ ಕನ್ನಡಿಗರ ಪಾಲಿಗೆ ಭ್ರಷ್ಟಾಚಾರದ ಬಕಾಸುರರಾಗಿದ್ದಾರೆ. ಇವರು ಜನರ ಹಣ ಹಾಗೂ ಜೀವನವನ್ನೇ ನುಂಗುತ್ತಿದ್ದಾರೆ ಎಂದ ಪ್ರಿಯಾಂಕ್ ಖರ್ಗೆ, ಕಾರ್ಮಿಕ ಇಲಾಖೆಯ ಟೆಂಡರ್ ದಾಖಲೆಯಲ್ಲಿ, ‘ಯಾರು ಈ ಟೆಂಡರ್ ಪಡೆಯುತ್ತಾರೋ ಅವರೇ ಮೂರನೇ ವ್ಯಕ್ತಿ ನೇಮಿಸಿ ಸಮೀಕ್ಷೆ ಹಾಗೂ ಗುಣಮಟ್ಟದ ಪರೀಕ್ಷೆ ಮಾಡಿಸಿ ಆ ಬಗ್ಗೆ ಸರ್ಕಾರಕ್ಕೆ ಪತ್ರ ನೀಡಬೇಕು’ ಎಂದು ತಿಳಿಸಲಾಗಿದೆ. ಶಾಲಾ ಕಿಟ್ ಗಳನ್ನು ಕಾರ್ಮಿಕರ ಮಕ್ಕಳ ಪೈಕಿ 5ನೇ ತರಗತಿಯವರಿಗೆ ಮೊದಲು ನೀಡಿ, ನಂತರ ಉಳಿದರೆ 4,3,2,1ರಂತೆ ತರಗತಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದೆ. ಹಾಗಿದ್ದರೆ ಇದನ್ನು ಕೇವಲ 5ನೇ ತರಗತಿಗೆ ಎಂದು ಟೆಂಡರ್ ಕರೆಯಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.

ಸರ್ಕಾರದ ಬಳಿ ಯಾವ ತರಗತಿಯಲ್ಲಿ ಎಷ್ಟು ಜನ ನೊಂದಾಯಿತ ಕಾರ್ಮಿಕ ಮಕ್ಕಳಿದ್ದಾರೆ ಎಂಬ ಅಂಕಿ ಅಂಶಗಳು ಇಲ್ಲ. ಸಮೀಕ್ಷೆ ನಡೆಸದೇ, ಅಂಕಿ ಅಂಶಗಳು ಇಲ್ಲದೇ ಈ ಟೆಂಡರ್ ಕರೆದಿದ್ದಾರೆ. ಇದು ಆಡಳಿತ ನಡೆಸುವ ರೀತಿಯೇ? ಇದು ಕಾರ್ಮಿಕರ ಅಭಿವೃದ್ಧಿಗೆ ತೆಗೆದುಕೊಂಡಿರುವ ತೀರ್ಮಾನವೇ? ಸಾಮಾನ್ಯವಾಗಿ ಸಮೀಕ್ಷೆ ಮಾಡಿ ನಂತರ ಎಷ್ಟು ಮಕ್ಕಳಿದ್ದಾರೆ ಎಂದು ಅಂಕಿ ಅಂಶ ಪಡೆದು ಆ ನಂತರ ಟೆಂಡರ್ ಕರೆಯಬೇಕು. ಆದರೆ ಇಲ್ಲಿ ಯಾವುದೇ ಮಾಹಿತಿ ಇಲ್ಲದೇ ಈ ಟೆಂಡರ್ ಕರೆದಿದ್ದಾರೆ. ಈ ಇಲಾಖೆ ಕಾರ್ಮಿಕರ ಏಳಿಗೆಗಾಗಿ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಇವರು ಶಾಲಾ ಮಕ್ಕಳಿಗೆ ಕಿಟ್ ನೀಡುವುದಾದರೆ, ಶಿಕ್ಷಣ ಇಲಾಖೆ ಏನು ಮಾಡುತ್ತಿದೆ? ಈ ಸರ್ಕಾರದ ಯೋಗ್ಯತೆಗೆ ಈವರೆಗೂ ಸರಿಯಾಗಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ನೀಡಲು ಆಗಿಲ್ಲ. ಇವು ಸ್ಕೂಲ್ ಕಿಟ್ ಅಲ್ಲ ಬಿಜೆಪಿ ಭ್ರಷ್ಟಾಚಾರದ ಟೂಲ್ ಕಿಟ್ ಆಗಿದೆ. ಕರ್ನಾಟಕ ಕಟ್ಟುತ್ತಿರುವ ಕಾರ್ಮಿಕರಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿಯವರು ಮಾತೆತ್ತಿದರೆ ದಾಖಲೆ ಕೊಡಿ ಎನ್ನುತ್ತಾರೆ. ಇವರು ಕಾರ್ಮಿಕರ ಪರವಾಗಿದ್ದರೆ ಈ ಕಿಟ್ ತರೆಸಿ ಮಾರುಕಟ್ಟೆಯಲ್ಲಿ ಈ ಉಪಕರಣಗಳ ಬೆಲೆ ಏನು ಎಂದು ಪರಿಶೀಲಿಸಿ. ಇಲ್ಲಿ ಯಾವುದೇ ಉನ್ನತ ಮಟ್ಟದ ತನಿಖೆ ಅಗತ್ಯವೇ ಇಲ್ಲ. ಇಲ್ಲಿ ಉಪಕರಣಗಳ ಬೆಲೆ ದುಪ್ಪಟ್ಟಾಗಿದ್ದರೆ ನೀವು ರಾಜೀನಾಮೆ ನೀಡುತ್ತೀರಾ? ಎಂದು ಸವಾಲು ಹಾಕಿದರು.

ಬಿಜೆಪಿ ಭರವಸೆ ಎಂದು ಪೋಸ್ಟರ್ ಹಾಕುತ್ತಾರೆ. ಕಾರ್ಮಿಕರಿಗೆ 10 ಭರವಸೆ ನೀಡಿದ್ದು ಒಂದಾದರೂ ಭರವಸೆ ಈಡೇರಿಸಿದ್ದೀರಾ? ಈ ಸರ್ಕಾರ ದುಡಿಯುವ ಕೈಯಿಂದ ಕಿತ್ತು ತಿನ್ನುತ್ತಿದ್ದಾರೆ. ಕಾರ್ಮಿಕರು, ಮೇಷನ್, ಎಲೆಕ್ಟ್ರಿಷಿಯನ್ ಕಿಟ್ ಗಳಲ್ಲಿ ಹಗರಣ ಮಾಡುತ್ತಿದ್ದಾರೆ. ಕೋವಿಡ್ ನಿಂದ ಜನ ಬದುಕು ಹಾಗೂ ಜೀವನೋಪಾಯ ಕಳೆದುಕೊಂಡಿದ್ದಾರೆ. ರಾಷ್ಟ್ರದಲ್ಲಿ ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದರೆ ಅದಕ್ಕೆ ಕಾರ್ಮಿಕರು ಕಾರಣ. ಇವರೇ ನಮ್ಮ ಆಧಾರವಾಗಿದ್ದು ಈ ಆಧಾರವನ್ನೇ ಬಿಜೆಪಿ ಭ್ರಷ್ಟಾಚಾರದ ಮೂಲಕ ಅಲುಗಾಡಿಸುವ ಪ್ರಯತ್ನ ಮಾಡುತ್ತಿದೆ ಎಂದ ಅವರು, ಅವರಿಗೆ ಧಮ್ಮು ತಾಕತ್ತು ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಿ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಹೋಗಿ ನಾವು ಸಾಕ್ಷಿ ನೀಡುತ್ತೇವೆ. ಇವರು ನ್ಯಾಯಾಂಗ ತನಿಖೆ ನೀಡುವುದು ಅನುಮಾನ. ಅದು ನೀಡಲು ಆಗದಿದ್ದರೆ ಈ ಕಿಟ್ ತರಿಸಿ, ಇವುಗಳ ಮೌಲ್ಯ ಎಷ್ಟಿದೆ ಎಂದು ಅವರೇ ಪರಿಶೀಲನೆ ಮಾಡಲಿ. ಇಷ್ಟಾದರೂ ಇಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದರೆ ರಾಜ್ಯವನ್ನು ದೇವರೆ ಕಾಪಾಡಬೇಕು. ಇವರು ಭ್ರಷ್ಟಾಚಾರದ ಬಕಾಸುರರಾಗಿದ್ದಾರೆ. ಎಷ್ಟು ತಿಂದರೂ ಇವರಿಗೆ ತೃಪ್ತಿಯಾಗುತ್ತಿಲ್ಲ. ನಾವು ಕಾರ್ಮಿಕರ ಪರವಾಗಿ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ತನಿಖೆ ಮಾಡಿಸುತ್ತೇವೆ ಎಂದರು.

ಪ್ರತಿ ಶಾಲಾ ಕಿಟ್ ಗೆ 9 ಸಾವಿರ ಬೆಲೆ ನಿಗದಿ ಮಾಡಿದ್ದಾರೆ. ಕಾರ್ಮಿಕ ಇಲಾಖೆಯವರು ನೋಟ್ ಬುಕ್ ಪೆನ್, ಸ್ವೆಟ್ ನೀಡುತ್ತಿದ್ದರೆ, ಶಿಕ್ಷಣ ಸಚಿವರು ಏನು ಮಾಡುತ್ತಿದ್ದಾರೆ? ಅವರು ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದಾರಾ? ಎಂದೂ ಅವರು ಪ್ರಶ್ನಿಸಿದರು.

ಇದೇ ವೇಳೆ, ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಸರ್ಕಾರ ಕಳಪೆ ಗುಣಮಟ್ಟದ ಉಪಕರಣ ನೀಡಿ, ದುಪ್ಪಟ್ಟು ಹಣ ನಿಗದಿ ಮಾಡಿದ್ದಾರೆ. ಇದು 70% – 80% ರಷ್ಟು ಕಮಿಷನ್ ಹಗರಣವಾಗಿದೆ. ಇದು ಭ್ರಷ್ಟಾಚಾರದ ಒಂದು ಭಾಗ. ಆರೋಗ್ಯ ಶಿಬಿರ ಹೆಸರಲ್ಲಿ ಹಗರಣ ಮಾಡುತ್ತಿದ್ದಾರೆ. ಒಂದು ಪರೀಕ್ಷೆಗೆ 9 ಸಾವಿರ ನಿಗದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಇವರ ಅಕ್ರಮಗಳನ್ನು ಬಯಲು ಮಾಡುತ್ತೇವೆ. ಕಾರ್ಮಿಕರ ಕಲ್ಯಾಣಕ್ಕಾಗಿ ಪಿ.ವಿ ನರಸಿಂಹರಾವ್ ಅವರು ಕಾರ್ಮಿಕ ಕಲ್ಯಾಣ ಯೋಜನೆ ಜಾರಿ ಮಾಡಿದರು. ಆದರೆ ಕಾರ್ಮಿಕ ಇಲಾಖೆ ಮಂತ್ರಿಗಳು ಮಂಡಳಿಯ ಅಭಿಪ್ರಾಯ ಪಡೆಯದೇ ಈ ಟೆಂಡರ್ ಗಳಿಗೆ ಅನುಮತಿ ಪಡೆಯುತ್ತಿದ್ದಾರೆ ಎಂದು ದೂರಿದರು.

 

Related posts