ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ರಾಜ್ಯ ಸರ್ಕಾರ ಮುನ್ನುಡಿ ಬರೆಯುತ್ತಿದ್ದಂತೆಯೇ ಇತರ ಸಮುದಾಯಗಳೂ ಹಕ್ಕೊತ್ತಾಯ ಮಂಡಿಸಲು ಮುಂದಾಗಿವೆ. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯೊಂದಿಗೆ ಪ್ರಬಲ ಸಮುದಾಯವಾಗಿರುವ ವೀರಶೈವ ಲಿಂಗಾಯತ ಏಳಿಗೆಗೆ ಶೀಘ್ರವೇ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿ ಮುಂದೆ ಆ ಸಮುದಾಯದ ಮುಖಂಡರು ಬೇಡಿಕೆ ಇಟ್ಟಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯ ಚುನಾವಣೆ ಬಂದಾಗ ಮಾತ್ರ ಆಶ್ವಾಸನೆ ಕೊಡುವುದಕ್ಕೆ ನೆನಪಾಗುತ್ತದಾ? ಅತಿ ಹೆಚ್ಚು ಜನಸಂಖ್ಯೆ ಮತ್ತು ಮತದಾರರಿರುವ ಸಮುದಾಯ ಸರ್ಕಾರದ ಮುಂದೆ ಭಿಕ್ಷೆ ಕೇಳಬೇಕಾ ಎಂದುವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಹೇಳಿದ್ದಾರೆ.
ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕಳೆದ ಹಲವು ವರ್ಷಗಳಿಂದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಮುದಾಯದ ಹಲವು ಸಂಘಟನೆಗಳು, ಮಠಾಧಿಪತಿಗಳು ಸರ್ಕಾರದ ಮೇಲೆ ಸತತ ಒತ್ತಡ ಹಾಕುತ್ತಿದ್ದರೂ ತಾವು ಕಡೆಗಣಿಸುತ್ತಿರುವುದು ಸರಿಯಲ್ಲ. ಇದು ಸಮುದಾಯಕ್ಕೆ ಮಾಡುತ್ತಿರುವ ದೊಡ್ಡ ವಂಚನೆ ಎಂದು ಅವರು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮದೇ ಸಮುದಾಯದ ಸಿಎಂ ಬೇಡಿಕೆ ಈಡೇರಿಸುತ್ತಾರೆಂಬ ನಂಬಿಕೆ ಹುಸಿಯಾಗುತ್ತಿದೆ. ಇನ್ನೂ ತಾಳ್ಮೆ ಪರೀಕ್ಷೆ ಬೇಡ. ಶೀಘ್ರದಲ್ಲೇ ಸಮುದಾಯದ ಅಭಿವೃದ್ಧಿ ನಿಗಮ ಘೋಷಣೆ ಆಗದಿದ್ದಲ್ಲಿ ರಾಜ್ಯವ್ಯಾಪಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.