ಬೆಳಗಾವಿ: ಮಹಾದಾಯಿ ವಿವಾದ ಕುರಿತಂತೆ ಕಾನೂನು ತೊಡಕುಗಳು ದೂರವಾಗಿಲ್ಲ. ಹಾಗಿರುವಾಗ ತರಾತುರಿಯಲ್ಲಿ ಕಳಸಾ ಬಂಡೂರಿ ನಾಲಾ ಯೋಜನಾ ಕಾಮಗಾರಿ ಆರಂಭಿಸುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ. ಮಹದಾಯಿ ನದಿ ನೀರು ಹಂಚಿಕೆ ಕುರಿತ ಸ್ಪಷ್ಟ ತೀರು ಪ್ರಕಟವಾದ ನಂತರವೇ ಯೋಜನೆ ಜಾರಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸುಪ್ರೀಂ ಕೋರ್ಟ್ ತೀರ್ಪು ಅನುಸರಿಸಿ ಕೇಂದ್ರ ಸರ್ಕಾರವು ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸಿದೆಯಾದರೂ ಇದನ್ನೇ ಆಧರಿಸಿ ಕಾಮಗಾರಿ ಆರಂಭಿಸಲಾಗದು. ಎಲ್ಲಾ ಕಾನೂನು ಅಡ್ಡಿ ಆತಂಕ ದೂರವಾದ ನಂತರವಷ್ಟೇ ಯೋಜನೆಯ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಸದ್ಯ ಈ ವಿವಾದ ಇನ್ನೂ ಕೂಡಾ ನ್ಯಾಯಾಲಯದಲ್ಲಿದೆ. ಸೋಮವಾರ ಮತ್ತೆ ಸುಪ್ರೀಂ ಕೋರ್ಟಿನಲ್ಲಿ ಈ ಕುರಿತ ವಿಚಾರಣೆ ನಡೆಯಲಿದೆ. ಬರುವ ಜುಲೈ ತಿಂಗಳಿನಲ್ಲಿ ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಕರ್ನಾಟಕಕ್ಕೆ 44 ಟಿಎಂಸಿಕ್ಕಿಂತಲೂ ಹೆಚ್ಚು ನೀರು ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.