ನವದೆಹಲಿ: ಪ್ರದೇಶ ಕಾಂಗ್ರೆಸ್ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಹಲವು ರಾಜ್ಯಗಳಿಗೆ ಹೊಸಬರನ್ನು ಎಐಸಿಸಿ ನೇಮಕ ಮಾಡಿದೆ. ಇದೇ ವೇಳೆ, ಪ್ರದೇಶ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಕರ್ನಾಟಕದ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಹರಿಯಾಣಕ್ಕೆ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ತಮಿಳುನಾಡು ಮತ್ತು ಪುದುಚೇರಿಗೆ ಗಿರಿ ಚೋಡಂಕರ್ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.
ಶುಕ್ರವಾರ ನಡೆದ ಪ್ರಮುಖ ಪುನರ್ರಚನೆಯಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳನ್ನು AICC ನೇಮಿಸಿದೆ. ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಪಂಜಾಬ್‌ಗೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ. ಮಧ್ಯಪ್ರದೇಶಕ್ಕೆ ವರ್ಗಾವಣೆಗೊಂಡಿರುವ ಹರೀಶ್ ಚೌಧರಿ ಅವರ ಬದಲಿಗೆ ಬಘೇಲ್ ನೇಮಕಗೊಂಡಿದ್ದಾರೆ.
ಕರ್ನಾಟಕದ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ನಾಸೀರ್ ಹುಸೇನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರ ಕಚೇರಿಗೆ ಸಂಬಂಧಿಸಿದ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲಾಗಿದೆ.
ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ರಾಜ್ಯಸಭಾ ಸದಸ್ಯೆ ರಜನಿ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿ ರಜನಿ ಪಟೇಲ್ ನೇಮಕಗೊಂಡಿದ್ದಾರೆ. ಮಧ್ಯಪ್ರದೇಶದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್, ತೆಲಂಗಾಣದ ಹೊಸ ಉಸ್ತುವಾರಿಯಾಗಿದ್ದಾರೆ. ಕೇರಳ ಮತ್ತು ಲಕ್ಷದ್ವೀಪಕ್ಕೆ ಎಐಸಿಸಿ ಉಸ್ತುವಾರಿಯಾಗಿ ದಾಸ್ಮುನ್ಷಿ ಮುಂದುವರಿಯಲಿದ್ದಾರೆ.
ಒಡಿಶಾಕ್ಕೆ ಅಜಯ್ ಕುಮಾರ್ ಲಲ್ಲು ಅವರನ್ನು ಹೊಸ ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಜಾರ್ಖಂಡ್‌ಗೆ ಕೆ. ರಾಜು ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.
ಸಪ್ತಗಿರಿ ಶಂಕರ್ ಉಲಕ ಅವರನ್ನು ಮಣಿಪುರ, ತ್ರಿಪುರ, ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ. ಬಿಹಾರಕ್ಕೆ ಕೃಷ್ಣ ಅಲ್ಲಾವರು ಅವರನ್ನು ಹೊಸ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಈ ಸಂಬಂಧ ಹೇಳಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.