ಮಾದಕ ವ್ಯಸನ ಜಾಲಕ್ಕೆ ಅಂಕುಶ.. ಮಂಗಳೂರು ಕಮೀಷನರ್ ಹೊಸ ತಾಲೀಮು

ಮಂಗಳೂರು: ಬಂದರು ನಗರಿ ಮಂಗಳೂರಿನ ಪೊಲೀಸರು ಜನಹಿತ ಕ್ರಮದಿಂದಾಗಿ ಇದೀಗ ರಾಜ್ಯದ ಗಮನಸೆಳೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕ್ರಿಯಾಶೀಲ ಕ್ರಮಕ್ಕೆ ಹೆಸರಾಗಿರುವ ಐಪಿಎಸ್ ಅಧಿಕಾರಿ ಕುಲದೀಪ್‌ ಕುಮಾರ್‌ ಜೈನ್‌, ಇದೀಗ ಮಂಗಳೂರು ನಗರದಲ್ಲಿ ಕೈಗೊಂಡಿರುವ ತಾಲೀಮು ಮಾದರಿ ಎನಿಸಿದೆ.

ಸಮಾಜಕ್ಕೆ ಕಂಟಕದ ಪರಿಸ್ಥಿತಿಗೆ ಕಾರಣವಾಗಬಲ್ಲ ಮಾದಕ ವ್ಯಸನ ಜಾಲಕ್ಕೆ ಅಂಕುಶ ಹಾಕಲು ಪ್ರಯತ್ನ ನಡೆದಿರುವಾಗಲೇ, ಮತ್ತೊಂದೆಡೆ ಯುವಜನರಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆಗೂ ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ಮುನ್ನುಡಿ ಬರೆದಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಕಮಿಷನರೆಟ್‌ ವ್ಯಾಪ್ತಿಯ ವಿವಿಧೆಡೆ ಡ್ರಗ್ಸ್‌ ಸೇವನೆ ಪ್ರಕರಣಗಳಲ್ಲಿ ಪಾಸಿಟಿವ್‌ ಬಂದವರಿಗೆ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ತಾವೇ ಖುದ್ದಾಗಿ ಕೌನ್ಸೆಲಿಂಗ್‌ ನಡೆಸಿದ ಕುಲದೀಪ್‌ ಕುಮಾರ್‌ ಅವರು ಕುತೂಹಲದ ಕೇಂದ್ರಬಿಂದುವಾದರು.

ಕೆಲ ಸಮಯದ ಹಿಂದೆ ರಾಜಧಾನಿ ಬೆಂಗಳೂರಿನ ಸಂಚಾರ ಉಪ ಪೊಲೀಸ್ ಆಯುಕ್ತರಾಗಿದ್ದಾಗ ಕುಲದೀಪ್‌ ಕುಮಾರ್‌ ಜೈನ ಅವರು, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಂಚಾರ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣರಾಗಿದ್ದರು.  ತಮ್ಮ ವಿಭಾಗದ ಅಧಿಕಾರಿಗಳನ್ನು ಬಳಸಿಕೊಂಡು ಸಂಚಾರ ನಿಯಮಗಳ ಪರಿಪೂರ್ಣ ಜಾರಿ ಸಂಬಂಧ ತಮ್ಮದೇ ಶೈಲಿಯಲ್ಲಿ ಕಾರ್ಯಾಚರಣೆ ಕೈಗೊಂಡು ಶ್ಲಾಘನೆಗೆ ಪಾತ್ರರಾಗಿದ್ದರು. ಸಂಚಾರ ನಿಯಮಗಳ ಜಾರಿಗೆ ಮುನ್ನ ಸಾರ್ವಜನಿಕರಿಗೆ ಅದರ ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕೆಂಬುದು ಅವರ ನಿಲುವಾಗಿತ್ತು. ಅದರಂತೆ ಪ್ರತೀ ಸಿಗ್ನಲ್’ಗಳಲ್ಲಿ ವಾಹನ ಸವಾರರಿಗೆ ರೂಲ್ಸ್ ಬಗ್ಗೆ ತಿಳಿಹೇಳುವ ಕೆಲಸ ನಡೆಯುತ್ತಿತ್ತು.

ಇದೀಗ ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿದ್ದಾಗಲೂ ಅದೇ ತಲರೀತಿ ಪ್ರಯತ್ನವನ್ನು ಮುಂದುವರಿಸಿರುವ ಕುಲದೀಪ್‌ ಕುಮಾರ್‌ ಜೈನ್, ಪ್ರಮುಖವಾಗಿ 112 ಪೊಲೀಸ್ ವಾಹನಗಳ ಮೂಲಕ ಸಾರ್ವಜನಿಕರಿಗೆ ಸಮಾಜಹಿತ ನಡೆ ಬಗ್ಗೆ ತಿಳಿಹೇಳುವ ಕೆಲಸ ಕೈಗೊಂಡಿದ್ದಾರೆ. ಅದರಂತೆ ನಿತ್ಯವೂ ಮಂಗಳೂರಿನ ಎಲ್ಲಾ ದಿಕ್ಕುಗಳಲ್ಲಿ ಹೊಯ್ಸಳ ವಾಹನಗಳ ಜಾಗೃತಿ ಅಭಿಯಾನವು ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿದೆ.

ಪ್ರಕರಣಗಳು ಘಟಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳುವುದಕ್ಕಿಂತ, ಘಟನೆಗೆ ಮುನ್ನವೇ ಜಾಗೃತಿ ವಹಿಸುವುದು ಸೂಕ್ತ ಎಂಬ ನಿಟ್ಟಿನಲ್ಲಿ ಅವರು ಈ ನಡೆ ಅನುಸರಿಸಿದ್ದಾರಂತೆ, ಇದೇ ನಡೆಯನ್ನು ಅವರು ಡ್ರಗ್ಸ್ ವಿಚಾರದಲ್ಲೂ ಅನುಸರಿಸಿದ್ದಾರೆ. ವಂಚನೆಗೊಳಗಾಗುವವರು ಇರುವಷ್ಟು ಕಾಲ ವಂಚಕರು ಇರುತ್ತಾರೆ ಎಂಬ ಮಾತಿನಂತೆ ‘ವ್ಯಸನಿಗಳು ಇರುವಷ್ಟು ಸಮಯ ಪೆಡ್ಲರ್’ಗಳೂ ಕೃತ್ಯಗಳನ್ನು ನಡೆಸುತ್ತಿರುತ್ತಾರೆ’. ಹಾಗಾಗಿ ಡ್ರಗ್ಸ್ ಪೆಡ್ಲರ್’ಗಳ ವಿರುದ್ಧ ಬೇಟೆ ನಡೆಯುತ್ತಿರುವಂತೆಯೇ ಡ್ರಗ್ಸ್ ಬಳಕೆಯಿಂದ ಯುವಜನರನ್ನು ದೂರ ಮಾಡಿಸುವ ಪ್ರಯತ್ನಕ್ಕೂ ಕುಲದೀಪ್ ಕುಮಾರ್ ಜೈನ್ ಮುಂದಾಗಿದ್ದಾರೆ.

ಇದಕ್ಕಾಗಿ ವಾರಾಂತ್ಯದ ದಿನ ಭಾನುವಾರವನ್ನು ಆಯ್ಕೆ ಮಾಡಿಕೊಂಡ ಅವರು ಡ್ರಗ್ಸ್ ಸೇವನೆಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ನೂರಾರು ಮಂದಿ ಯುವಜನರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಕೌನ್ಸೆಲಿಂಗ್ ಮಾಡಿದ್ದಾರೆ. ಡ್ರಗ್ಸ್ ಬಳಕೆಯಿಂದ ಆರೋಗ್ಯ ಹಾಗೂ ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ನೀತಿ ಪಾಠ ಹೇಳಿದ್ದಾರೆ.

ಡಿಸಿಪಿಗಳಾದ ಅಂಶು ಕುಮಾರ್‌ ಮತ್ತು ದಿನೇಶ್‌ ಕುಮಾರ್‌ ಅವರೂ ವ್ಯಸನಿಗಳ ಜೊತೆ ಸಮಾಲೋಚನೆ ನಡೆಸಿದರು. ಮಾದಕ ವಸ್ತು ಸೇವನೆಯಿಂದ ಹೇಗೆ ಹೊರಗೆ ಬರಬಹುದು ಎಂಬ ಬಗ್ಗೆಯೂ ತಿಳಿಹೇಳಿದರು. ಅಷ್ಟೇ ಅಲ್ಲ ಡ್ರಗ್ಸ್ ವಿಚಾರದಲ್ಲಿ ಪ್ರಕರಣ ದಾಖಲಾಗುವುದರಿಂದ ಏನೆಲ್ಲ ಸಂಕಷ್ಟಗಳನ್ನು ಅನುಭವಿಸಬೇಕು ಎಂಬ ಎಚ್ಚರಿಕೆಯನ್ನೂ ನೀಡಿದರು. ಎಸಿಪಿಗಳು, ವಿವಿಧ ಠಾಣೆಗಳ, ಇನ್‌ಸ್ಪೆಕ್ಟರ್‌ಗಳೂ ಈ ಕಾರ್ಯಾಚರಣೆಯ ಭಾಗವಾಗಿದ್ದರು.

Related posts