ಕಾಯಕ ಯೋಗಿಯ ಮತ್ತೊಂದು ನಡೆ.. ಶಾಸಕ ರಾಜೇಶ್ ನಾಯ್ಕರ ‘ಒಡ್ಡೂರು ಎನರ್ಜಿ’ ಬಗ್ಗೆ ಕೇಂದ್ರ ಮಂತ್ರಿ ಶ್ಲಾಘನೆ

ಮಂಗಳೂರು: ಕಾಯಕ ಯೋಗಿ ಶಾಸಕ ರಾಜೇಶ್ ನಾಯ್ಕ್ ಇದೀಗ ‘ಇಂಧನ’ ಕ್ಷೇತ್ರಕ್ಕೆ ಶಕ್ತಿ ತುಂಬಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ‘ಒಡ್ಡೂರು ಫಾರ್ಮ್ಸ್’ನಲ್ಲಿ ಬಯೋವಸಿ ಎನ್.ಜಿ. ಉತ್ಪಾದನೆ ಮಾಡುವ ಒಡ್ಡೂರು ಎನರ್ಜಿ ಘಟಕವನ್ನು ಆರಂಭಿಸಿ ಗಮನಸೆಳೆದಿದ್ದಾರೆ. ಈ ಘಟಕ ಇದೀಗ ಲೋಕಾರ್ಪಣೆಗೊಂಡಿದೆ.


‘ಒಡ್ಡೂರು ಫಾರ್ಮ್ಸ್’ನಲ್ಲಿ ನಿರ್ಮಾಣಗೊಂಡಿರುವ ‘ಬಯೋವಸಿ ಎನ್.ಜಿ. ಉತ್ಪಾದನೆ ಮಾಡುವ ‘ಒಡ್ಡೂರು ಎನರ್ಜಿ’ಯನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರು ಶುಕ್ರವಾರ ಉದ್ಘಾಟಿಸಿದರು. ಬಯೋ ಗ್ಯಾಸ್ ಉತ್ಪಾದನೆ, ಗೊಬ್ಬರ ಉತ್ಪಾದನೆಗೆ ಸಬ್ಸಿಡಿ, ಸವಲತ್ತು ನೀಡಲಾಗುವುದು, ಅವುಗಳನ್ನು ಬ್ರಾಂಡಿಂಗ್ ಮಾಡುವ ಕಾರ್ಯಕ್ಕೆ ಕೇಂದ್ರ ಪ್ರೋತ್ಸಾಹ ನೀಡುತ್ತದೆ ಎಂದರು

ದೇಶದಲ್ಲಿ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು 2030ರೊಳಗೆ ಉತ್ಪಾದನೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಸವಾಲುಗಳನ್ನು ಸ್ವೀಕರಿಸುವ ಮೂಲಕ ಶಾಸಕ ರಾಜೇಶ್ ನಾಯ್ಕ್ ಅವರು ಬಯೋ ಸಿ.ಎನ್.ಜಿ. ಘಟಕ ಆರಂಭಿಸಿದ್ದು ಮಾದರಿಯಾಗಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸರಕಾರಗಳಿಗೆ ಪ್ರೇರಣೆ ನೀಡುವ ಕಾರ್ಯವನ್ನು ಶಾಸಕರು ತನ್ನ ಜಾಗದಲ್ಲಿ ಮಾಡಿದ್ದಾರೆ. ಪ್ರಕೃತಿಗೆ ಪೂರಕವಾದ ಮಾದರಿ ಘಟಕ ಎಂದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಮಾತನಾಡಿ, ಬಿಸಾಡುವಂಥ ವಸ್ತುಗಳನ್ನು ಜೋಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.

ಏನಿದು ‘ಒಡ್ಡೂರು ಎನರ್ಜಿ’..?

‘ಒಡ್ಡೂರು ಎನರ್ಜಿ’ ಕುರಿತಂತೆ ಪ್ರಶಾಂತ್ ಲಕ್ಷ್ಮಣ ದೇವಾಡಿಗ ಅವರು ಮಾಹಿತಿ ನೀಡಿದರು. ಬಂಟ್ವಾಳ ಶಾಸಕ, ಒಡ್ಡೂರು ಫಾರ್ಮ್ಸ್ ಮಾಲೀಕ ರಾಜೇಶ್ ನಾಯ್ಕ್ ಸ್ವಾಗತಿಸಿ, ಘಟಕ ನಿರ್ಮಾಣಕ್ಕೆ ಕಾರಣಗಳನ್ನು ತಿಳಿಸಿ, ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿಗೆಂದು ಆರಂಭಿಸಿದ ಈ ಪರಿಕಲ್ಪನೆ ಸುತ್ತಮುತ್ತಲಿನ ಊರುಗಳ ತ್ಯಾಜ್ಯಗಳನ್ನು ಪಡೆದುಕೊಂಡ ಸಿ.ಎನ್.ಜಿ. ಉತ್ಪಾದನೆವರೆಗೆ ತಲುಪಿದೆ ಎಂದು ಹೇಳಿದರು.

ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಯಶಪಾಲ್ ಸುವರ್ಣ, ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ಒಡ್ಡೂರು ಎನರ್ಜಿ’ ಪಾಲುದಾರ ಉನ್ನತ್ ನಾಯ್ಕ್ ಉಪಸ್ಥಿತರಿದ್ದರು. ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related posts