MCC ಹಗರಣ: 33 ಬ್ಯಾಂಕ್ ಸದಸ್ಯರ ದೂರಿನ ಹಿನ್ನೆಲೆ ಸರ್ಕಾರದಿಂದ ಪರಿಶೀಲನೆ ಬಿರುಸು

ಬೆಂಗಳೂರು: ಎಂಸಿಸಿ ಬ್ಯಾಂಕ್ ಹಗರಣಕ್ಕೆ ರೋಚಕ ತಿರುವು ಸಿಕ್ಕಿದೆ. ಹಲವಾರು ಅಕ್ರಮ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಾಗೂ ಅಕ್ರಮಗಳಿಂದ ರೋಸಿಹೋದ ಸದಸ್ಯರೊಬ್ಬರು ಸಾವಿಗೆ ಶರಣಾದ ಪ್ರಕರಣ ಹಿನ್ನೆಲೆಯಲ್ಲಿ ಎಂಸಿಸಿ ಬ್ಯಾಂಕ್ ಸೂಪರ್‌ಸೀಡ್ ಮಾಡಬೇಕೆಂಬ ಆಗ್ರಹ ಹೆಚ್ಚಾಗಿದೆ. ಈ ಕುರಿತಂತೆ ಎಂಸಿಸಿ ಬ್ಯಾಂಕಿನ ಸುಮಾರು 33 ಸದಸ್ಯರು ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಕಾರ್ಯದರ್ಶಿ ಸಹಿತ ಸರ್ಕಾರದ ಪ್ರಮುಖರಿಗೆ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಎಂಸಿಸಿ ಬ್ಯಾಂಕಿನ ವಿರುದ್ದದ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಹಕಾರ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳ ಪರಿಶೀಲನಾ ವರದಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆಯ ಅಧಿಕಾರಿಗಳ ಮಾಹಿತಿ ಹಂಚಿಕೊಂಡಿದ್ದಾರೆ.

‘ಮಂಗಳೂರು ಕೆಥೋಲಿಕ್ ಸಹಕಾರ ಬ್ಯಾಂಕ್ (MCC Bank) ಬಹುಕೋಟಿ ರೂಪಾಯಿ ಅವ್ಯವಹಾರ ಆರೋಪ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಸಾಲ ವಸೂಲಾತಿ ನೆಪದಲ್ಲಿ ಜನಸಾಮಾನ್ಯರ ಮೇಲೆ ಬ್ಯಾಂಕ್ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ಕೋರಿ ಹಾಗೂ ತನಿಖೆ ಪೂರ್ಣಗೊಳ್ಳುವವರೆಗೂ ಬ್ಯಾಂಕಿನ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿಟ್ಟು ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಬ್ಯಾಂಕ್ ಸದಸ್ಯರೇ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ರಾಜಣ್ಣ ಹಾಗೂ ಮುಖ್ಯಕಾರ್ಯದರ್ಶಿ, ಸಹಕಾರ ಸಂಘಗಳ ನಿಬಂಧಕರಿಗೆ ಬರೋಬ್ಬರಿ 33 ಸದಸ್ಯರು ಜ.23ರಂದು ದೂರು ಸಲ್ಲಿಸಿದ್ದಾರೆ.

ಕರಾವಳಿ ಜಿಲ್ಲೆಗಳ ಪ್ರತಿಷ್ಠಿತ MCC Bankನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಬಂದಿವೆ. ಈ ಬಗ್ಗೆ ದೂರು ದಾಖಲಾದರೂ ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೋ ಹಾಗೂ ಅವರ ಸಹಚರರು ಪ್ರಭಾವ ಬಳಸಿಕೊಂಡು ಕಾನೂನಿಂದ ನುಣುಚಿಕೊಳ್ಳುತ್ತಿದ್ದಾರೆ. ಒಂದು ವೇಳೆ ಬಲವಾದ ಕಾನೂನು ಹೋರಾಟಕ್ಕೆ ಮುಂದಾದಲ್ಲಿ ಅಂಥವರ ನಿಗೂಢ ಸಾವಿಗೆ ಕಾರಣವಾಗಿ ಸಾಮಾಜಿಕ ಭದ್ರತೆಗೆ ಸವಾಲಾಗುತ್ತಿದ್ದಾರೆ ಎಂದು ಈ ಸದಸ್ಯರು ಸಾಮೂಹಿಕ ದೂರಿನ ಮೂಲಕ ಸರ್ಕಾರದ ಗಮನಸೆಳೆದಿದ್ದಾರೆ. ಇತ್ತೀಚಿಗೆ MCC Bankನ ಸದಸ್ಯ ಮಂಗಳೂರಿನ ಉಳಾಯಿಬೆಟ್ಟು ಕುಟಿನೋ ಪದವು ನಿವಾಸಿ, ಅಂಗವೈಕಲ್ಯದಿಂದ ಬಳಲುತ್ತಿದ್ದ ಮನೋಹರ್ ಪಿರೇರಾ ಎಂಬವರು ಎಂಬವರು ಈ ಬಗ್ಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೇ ಸಾಕ್ಷಿಯಾಗಿದ್ದು, ಈ ಪ್ರಕರಣದಲ್ಲಿ Bank ಅಧ್ಯಕ್ಷ ಅನಿಲ್ ಕುಮಾರ್ ಲೋಬೊರವರು ಬಂಧನಕ್ಕೊಳಗಾಗಿ ವಿಚಾರಣೆ ನಡೆಸಿದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ ಎಂದು ಈ ಸದಸ್ಯರು ಸರ್ಕಾರದ ಗಮನಸೆಳೆದಿದ್ದಾರೆ.

MCC ಬ್ಯಾಂಕಿನ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ, ಜನರ ಸಾವಿಗೆ ಪ್ರೇರಣೆ, ಸರ್ಕಾರ ಹಾಗೂ ನ್ಯಾಯಾಂಗದ ಹೆಸರಲ್ಲಿ ಜನರಿಗೆ ಬೆದರಿಕೆ ಹಾಕುತ್ತಿರುವ ಕೃತ್ಯಗಳನ್ನೂ ಅನಿಲ್ ಕುಮಾರ್ ಲೋಬೋ ಮತ್ತು ಹಿಂಬಾಲಕರು ನಡೆಸುತ್ತಿರುವುದರಿಂದ ಬ್ಯಾಂಕಿನ ಅವ್ಯವಹಾರ ಪ್ರಕರಣಗಳು ಮತ್ತು ಸದರಿ ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಈ ದೂರಿನಲ್ಲಿ ಮನವಿ ಮಾಡಲಾಗಿದೆ. ಮನೋಹರ್ ಪಿರೇರಾ ಎಂಬವರ ಸಾವಿನ ಪ್ರಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಅಮಾಯಕನ ಸಾವಿಗೆ ನ್ಯಾಯ ಸಿಗುವ ಅನುಮಾನವನ್ನು ಈ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಅವರು ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದು, ಎಂಸಿಸಿ ಬ್ಯಾಂಕಿನಲ್ಲಿ ಸಾಲಪಡೆದವರನ್ನು ತಮ್ಮ ಚಿಟ್ ಫಂಡಿಗೂ ಸೇರಿಸಿಕೊಂಡು, ಹಣ ವಸೂಲಿ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಈ ಸದಸ್ಯರು, ಮನೋಹರ್ ಪಿರೇರಾ ಅವರನ್ನೂ ಇದೇ ರೀತಿಯ ದಂಧೆಗೆ ಬಲಿ ಪಡೆಯಲಾಗಿದೆ. ಮನೋಹರ್ ಪಿರೇರಾ ಅವರ ಚೆಕ್ಕುಗಳನ್ನು ಫೋರ್ಜರಿ ಮಾಡಿರುವ ಬಗ್ಗೆಯೂ ನ್ಯಾಯಾಲಯದ ಗಮನ ಸೆಳೆಯಲಾಗಿದೆ ಎಂದು ಸರ್ಕಾರಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಂಸಿಸಿ ಬ್ಯಾಂಕಿನಲ್ಲಿ ಈಗ ಲಂಚವಿಲ್ಲದೆ ಯಾವುದೇ ವಹಿವಾಟು ನಡೆಯಲ್ಲ. ಸಾಲ ಮಂಜೂರಾತಿಗೆ 15% ರಿಂದ 20% ಕಮೀಷನ್ ಅನ್ನು ಅಧ್ಯಕ್ಷರಿಗೆ ಕೊಡಬೇಕು. ಈ ಕಮೀಷನ್ ಮೂಲಕವೇ ಅನೇಕ ಮಂದಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮಂಜೂರು ಮಾಡಲಾಗಿದೆ. ಈ ಕಮಿಷನ್ ಮಾಫಿಯಾ ಮೂಲಕ ಗಳಿಸಿದ ನೂರಾರು ಕೋಟಿ ರೂಪಾಯಿ ಅಕ್ರಮ ಆಸ್ತಿಯ ಲೆಕ್ಕ ತೋರಿಸಲು ಚಿಟ್ ಫಂಡ್ ದಂಧೆ ನಡೆಸಲಾಗುತ್ತಿದೆ. ಬ್ಯಾಂಕಿನ ಸಾಲ ವಸೂಲಾತಿ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಅನಿಲ್ ಕುಮಾರ್ ಲೋಬೊರವರು, ಸಾಲ ಪಾವತಿಸಲು ವಿಳಂಬವಾದವರ ಆಸ್ತಿಯನ್ನು ತಮ್ಮ ಬೇನಾಮಿಗಳ ಹೆಸರಿಗೆ ಬರೆಸಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ಅಸ್ತಿ ಸಂಪಾದಿಸಿರುತ್ತಾರೆ ಮತ್ತು ಅಕ್ರಮ ಹಣ ವರ್ಗಾವಣೆ ಮಾಡಿರುತ್ತಾರೆ ಎಂದು ಆರೋಪಿಸಲಾಗಿದೆ.

ಈ ಅವ್ಯವಹಾರಗಳ ಬಗ್ಗೆ ಬ್ಯಾಂಕ್ ಸದಸ್ಯರು ಪ್ರಶ್ನಿಸಿದರೆ, ಅಂಥವರ ಬಗ್ಗೆ ಅಪಪ್ರಚಾರ ಮಾಡಿ ಬ್ಯಾಂಕಿನ ಸದ್ಯತ್ವದಿಂದ ವಜಾ ಮಾಡಿಸುತ್ತಾರೆ. ಅವ್ಯವಹಾರ ಬಗ್ಗೆ, ಮಾಹಿತಿ ಬಹಿರಂಗವಾದಲ್ಲಿ ಆ ಬಗ್ಗೆ ಯಾರ ಮೇಲೆ ಸಂಶಯ ಇರುತ್ತದೆಯೋ ಅಂತಹಾ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಾರೆ. ಅಥವಾ ಕೆಲಸದಿಂದಲೇ ವಜಾ ಮಾಡಿಸುತ್ತಾರೆ. ಇಂತಹಾ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ದೂರಿನಲ್ಲಿ ಗಮನಸೆಳೆಯಲಾಗಿದೆ.

ಜನಪ್ರತಿನಿಧಿಗಳು ಇರುವವರೆಗೆ ಹಾಗೂ ನ್ಯಾಯಾಲಯದಲ್ಲೂ ತನಗೆ ಬೇಕಾದವರು ಇರುವವರೆಗೂ ಯಾರೂ ಯಾವ ಕೇಸ್ ಹಾಕಿದರೂ ಏನೂ ಮಾಡಲಾಗಲ್ಲ ಎಂದು ಅನಿಲ್ ಕುಮಾರ್ ಲೋಬೋ ಹೇಳುತ್ತಿದ್ದರು. ಅನೇಕ ಪ್ರಕರಣಗಳಲ್ಲಿ ತನಿಖೆಗೆ ತಡೆಯಾಜ್ಞೆ ತರುತ್ತಿದ್ದ ಅವರು ಮನೋಹರ್ ಪಿರೇರಾ ರವರ ಸಾವಿನ ಕೇಸಿನಲ್ಲೂ ಬಂಧನವಾದ ಕೂಡಲೇ ಅನಾರೋಗ್ಯದ ಕಾರಣ ನೀಡಿ ಜೈಲಿನಿಂದ ಸ್ಥಳಾಂತರಗೊಂಡರು. ಅಷ್ಟೇ ಅಲ್ಲ, ಹೈಕೋರ್ಟಿನಿಂದ ತಡೆಯಾಜ್ಞೆ ತರುವಲ್ಲೂ ಸಫಲರಾಗಿದ್ದಾರೆ. ಅನಿಲ್ ಕುಮಾರ್ ಲೋಬೊರವರ ಹೇಳಿಕೆಗಳಿಗೂ ಪ್ರಕರಣದಲ್ಲಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿಗೂ ಸಾಮ್ಯತೆ ಕಂಡುಬರುತ್ತಿರುವುದರಿಂದ ಸದರಿ ಬ್ಯಾಂಕಿನ ಅವ್ಯವಹಾರಗಳು ಮತ್ತು ಮನೋಹರ ಪಿರೇರಾ ಸಾವಿನ ಪ್ರಕರಣದಲ್ಲೂ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿಲ್ಲ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶಿಸಬೇಕು ಹಾಗೂ ಪ್ರಕರಣದ ತನಿಖೆ ಪೂರ್ಣಗೊಳ್ಳುವ ವರೆಗೂ ಬ್ಯಾಂಕಿನ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿಟ್ಟು ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರ ಕ್ರಮವಹಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

Related posts