ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಸರ್ಕಾರದ ಕ್ರಮ: ವೈದ್ಯ ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ಬೆಂಗಳೂರು: ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಬೇರೆ ಮರುಹಂಚಿಕೆ ಮಾಡಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿ ವಿವಾದವನ್ನು ಮೆತ್ತಿಕೊಂಡಿದೆ. ಈ ಪ್ರಕ್ರಿಯೆ ವಿರುದ್ಧ ಸಿಡಿದೆದ್ದಿರುವ ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ-ಪಂಗಡ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಡಿಎಂಎ ನಿರ್ದೇಶಕರಿಗೆ ಬರೆದಿರುವ ಪತ್ರದಿಂದಾಗಿ ಇಡೀ ವಿವಾದ ಬಯಲಿಗೆ ಬಂದಿದೆ.

ಕಾಲೇಜೊಂದರ ವಿದ್ಯಾರ್ಥಿಗಳಿಗೆ ಬೇರೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಇದ್ದರೆ ರೂಪುರೇಷೆ ಸಿದ್ದಪಡಿಸಿ ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಲು ವಿಭಾಗೀಯ ಪೀಠ ಸೆಪ್ಟೆಂಬರ್ 26ರಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದು ಪರೀಕ್ಷೆ ಸಂಬಂಧ ತಾತ್ಕಾಲಿಕ ಕ್ರಮವಾಗಿರಬೇಕೆಂದೂ, ಶಾಶ್ವತ ಸ್ಥಳಾಂತರ ಬಗ್ಗೆ ಮೂಲ ಅರ್ಜಿ ಇತ್ಯರ್ಥದವರೆಗೂ ಆದೇಶವನ್ನು ನೀಡುವುದಿಲ್ಲ ಎಂದು ನ್ಯಾಯಪೀಠ ಹೇಳಿತ್ತು. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಶಾಶ್ವತ ಮರುಹಂಚಿಕೆ ಸಂಬಂಧ ಕ್ರಮ ಆರಂಭಿಸಿದೆ.

ಈ ಸಂಬಂಧ ಕೆಇಎ ಸುತ್ತೋಲೆ ಹೊರಡಿಸಿರುವ ಬಗ್ಗೆ ಆಕ್ಷೇಪಿಸಿರುವ ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ-ಪಂಗಡ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್, ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿದ್ದು ವೈದ್ಯ ಆಕಾಂಕ್ಷಿಗಳಿಗೆ ಸಾಕಷ್ಟು ಅವಕಾಶ ಸಿಗುತ್ತಿಲ್ಲ. ಹೀಗಿರುವಾಗ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವೈದ್ಯ ವಿದ್ಯಾರ್ಥಿಗಳ ಭವಿಷ್ಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಚೆಲ್ಲಾಟವಾಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜಿಗೆ ಅನುಮತಿ ನೀಡಿಲ್ಲ ಎಂಬ ನೆಪದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತಕ್ಕನುಗುಣವಾಗಿ ಸರ್ಕಾರ ಕ್ರಮ ಕೈಗೊಳ್ಳುವ ಬದಲು ವಿದ್ಯಾರ್ಥಿ ಸಮುದಾಯವನ್ನೇ ಹಾದಿ ತಪ್ಪಿಸಿ ಯುವಜನರ ಭವಿಷ್ಯವನ್ನೇ ಅತಂತ್ರವಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಬಹುತೇಕ ವಿದ್ಯಾರ್ಥಿಗಳ ನಿಲುವು ಹೀಗಿದೆ:

ಜಿ.ಆರ್.ಮೆಡಿಕಲ್ ಕಾಲೇಜಿನ ಅನುಮತಿ ವಿಷಯ ಪ್ರಸಕ್ತ ಹೈಕೋರ್ಟ್’ನಲ್ಲಿ ವಿಚಾರಣಾ ಹಂತದಲ್ಲಿರುವುದು ಸರ್ಕಾರಕ್ಕೆ ತಿಳಿದಿದೆ. ಸದರಿ ವೈದ್ಯಕೀಯ ಕಾಲೇಜಿನಲ್ಲಿ ಮೂಲಸೌಕರ್ಯ ಇದೆ ಎಂದು ಬಹುತೇಕ ವಿದ್ಯಾರ್ಥಿಗಳು ನಮ್ಮ ಸಂಘಟನೆಯ ಪ್ರಮುಖರೊಂದಿಗೆ ಹೇಳಿಕೊಂಡಿದ್ದಾರೆ. ಜೊತೆಗೆ ವಿಶ್ವವಿದ್ಯಾಲಯ ನಡೆಸಿರುವ ಕಳೆದ ಪರೀಕ್ಷೆಯಲ್ಲಿ ಇತರ ಕಾಲೇಜುಗಳಿಗಿಂತ ಈ ಕಾಲೇಜಿನಲ್ಲೇ ಹೆಚ್ಚು ಉತ್ತಮ ಫಲಿತಾಂಶ ಬಂದಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಕೆಲವು ಮಾಫಿಯಾ ಸುಳಿಯಲ್ಲಿ ಸಿಲುಕಿರುವ ವ್ಯಕ್ತಿಗಳು ಕಾಲೇಜು ಆರಂಭವಾದ ಒಂದು ವರ್ಷದ ಬಳಿಕ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಮರು ಹಂಚಿಕೆ ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ಅಧಿಕಾರಿಗಳು ತಿಳಿಯುವ ಪ್ರಯತ್ನ ಮಾಡದಿರುವುದನ್ನು ಗಮನಿಸಿದರೆ, ವೈದ್ಯಕೀಯ ಶಿಕ್ಷಣ ಇಲಾಖೆಯೂ ಮಾಫಿಯಾದ ಹಿಡಿತದಲ್ಲಿ ಸಿಲುಕಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಲೋಕೇಶ್ ರಾಮ್ ಹೇಳಿದ್ದಾರೆ.

ಡಿಜಿಟಲ್ ಸಿಗ್ನೇಚರ್ ಇಲ್ಲದ ಪತ್ರಗಳು ಫೇಕ್? 

ದೇಶದ ವೈದ್ಯಕೀಯ ಕಾಲೇಜುಗಳ ಅನುಮತಿ ವಿಚಾರದಲ್ಲಿ NMC ಕಣ್ಣಾಮುಚ್ಚಾಲೆ ಆಡುತ್ತಿರುವ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಲೇ ಇವೆ. ಅದೇ ರೀತಿ ರಾಜಕೀಯ ಲಾಭಿ ಹಿನ್ನೆಲೆಯಲ್ಲಿ ರಾಜ್ಯದ ವೈದ್ಯಕೀಯ ಕಾಲೇಜಿನ ಅನುಮತಿ ವಿಚಾರದಲ್ಲಿ NMC ಗೊಂದಲ ಸೃಷ್ಟಿಸಿದೆ. ಈಮೇಲ್ ನಿಂದ ರವಾನೆಯಾಗುವ ಡಿಜಿಟಲ್ ಸಿಗ್ನೇಚರ್ ಇಲ್ಲದ ಪತ್ರಗಳು ಫೇಕ್ ಆಗಿರುತ್ತದೆ ಎಂದು ಸೆ.4 ರಂದು ಸ್ವತಹ NMC ಯೇ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದರೂ, ವಿದ್ಯಾರ್ಥಿಗಳ ಸ್ಥಳಾಂತರ ಕುರಿತ ಸಂಶಯಾಸ್ಪದ ಪತ್ರವನ್ನು ಪರಿಶೀಲಿಸದೆ ತರಾತುರಿಯಲ್ಲಿ ಕ್ರಮ ಕೈಗೊಂಡಿರುವುದು ಸಮರ್ಪಕವಲ್ಲ. ಆದಾಗಿಯೂ ಬೇರೆ ಕಾಲೇಜುಗಳಿಗೆ ಸ್ಥಳಾಂತರ ಕೋರಿ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯು ಹೈಕೋರ್ಟಿನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು NMCಗೆ ಪತ್ರ ಬರೆದು ಅನುಮತಿ ಕೋರಿರುವುದು ಸರಿಯೇ? ಹೈಕೋರ್ಟಿನ ವಿಚಾರಣಾ ಹಂತದಲ್ಲೇ NMC ಅನುಮತಿ ನೀಡಲು ಸಾಧ್ಯಯೇ? ಎಂಬ ಬಗ್ಗೆ ಪರಾಮರ್ಶಿಸದೆ NMCಯ ಹೆಸರಲ್ಲಿ ಬಂದಿರುವ ಪತ್ರವನ್ನು ಪರಿಶೀಲಿಸದೆ ವಿದ್ಯಾರ್ಥಿಗಳ ಮರು ಹಂಚಿಕೆಗೆ ಕ್ರಮ ವಹಿಸಿರುವುದು ಸರಿಯಾದ ಕ್ರಮವಲ್ಲ ಎಂದು ಲೋಕೇಶ್ ರಾಮ್ ಅವರು ಸರ್ಕಾರದ ಗಮನಸೆಳೆದಿದ್ದಾರೆ.

ಹೈಕೋರ್ಟ್ ಆದೇಶಕ್ಕೆ ಮುನ್ನವೇ ಬೇರೆ ಕಾಲೇಜುಗಳಿಗೆ ವೈದ್ಯ ವಿದ್ಯಾರ್ಥಿಗಳನ್ನು ಮರುಹಂಚಿಕೆ ಮಾಡುವ ಮುನ್ನ ಆ ಕಾಲೇಜುಗಳ ಸಾಮರ್ಥ್ಯದ ಬಗ್ಗೆ ಪರಿಶೀಲನೆಯಾಗಬೇಕಿದೆ. ಒಂದು ವೇಳೆ ಆ ಕಾಲೇಜುಗಳಿಗೆ ಸೇರ್ಪಡೆ ಮಾಡಿದ ಬಳಿಕ ಇಡೀ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಕಂಡುಬಂದರೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ ಎಂದು ಲೋಕೇಶ್ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ಆತುರದ ಕ್ರಮಕ್ಕೆ ಮುಂದಾಗದೆ, ಪರಿಸ್ಥಿತಿಯನ್ನು ಪರಾಮರ್ಶಿಸಿ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ರಾಮ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Related posts