ಮೇಕೆದಾಟು ಯೋಜನೆ: ತಪ್ಪು ಮಾಹಿತಿ ಹರಿಬಿಟ್ಟರೇ ಸಿಎಂ? ಸಿದ್ದರಾಮಯ್ಯರಿಗೆ ಕೇಂದ್ರದ ತರಾಟೆ

ಬೆಂಗಳೂರು: ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ತಿಳಿದಿದ್ದರೂ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ದ ಮಾಹಿತಿ ಆಧರಿಸಿತಪ್ಪು ಮಾಹಿತಿಗಳ ಸರಣಿಯನ್ನೇ ಸಿಎಂ ಸಿದ್ದರಾಮಯ್ಯ ಹರಿಬಿಟ್ಟಂತೆ ತೋರುತ್ತದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟ್ಟರ್’ನಲ್ಲಿ ಪೋಸ್ಟ್ ಹಾಕಿರುವ ಗಜೇಂದ್ರ ಸಿಂಗ್ ಶೇಖಾವತ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಜಲಶಕ್ತಿ ಸಚಿವರು

ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ದ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ. ಹೀಗಾಗಿ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ ಎಂದಿರುವ ಕೇಂದ್ರ ಜಲಶಕ್ತಿ ಸಚಿವರು, ಮೊದಲನೆಯದಾಗಿ CWMA ಯ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ ಎಂದಿದ್ದಾರೆ.

ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್‌ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ? ಎಂದು , 2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)- ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ, ಮೂರು ಪೂರ್ಣಗೊಂಡಿದೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ.ಗಳ ಪೈಕಿ 1190.05 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಇದು ರಾಜ್ಯದ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಾರದಿರುವುದು ಚೋದ್ಯವಲ್ಲವೇ ? ಎಂದು ಪ್ರಶ್ನೆ ಮಾಡಿದ್ದಾರೆ.

ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ, ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ 629.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ 28.10.2023ರ ವರೆಗೆ ಕೇವಲ 274.05 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಂಡಿದ್ದೀರಿ ಎಂದು ಬೊಟ್ಟು ಮಾಡಿರುವ ಕೇಂದ್ರ ಜಲಶಕ್ತಿ ಸಚಿವರು, ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ. ಇಲ್ಲವಾದರೆ ಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯಕರ್ಮವೆಂದು‌‌ ಕರ್ನಾಟಕದ ಜನ ನಿಮ್ಮ ಬಗ್ಗೆ ಕನಿಕರ ಹಾಗೂ ತಿರಸ್ಕಾರವನ್ನು ತೋರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts