MES ಪುಂಡಾಟವನ್ನು ಮಟ್ಟಹಾಕಬೇಕು; ಜೆಡಿಎಸ್ ಆಗ್ರಹ

ಬೆಂಗಳೂರು: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆಯೇ ದುಷ್ಕರ್ಮಿಗಳು ಐದು ಮಂದಿಗೆ ಚಾಕು ಇರಿದು ಅಟ್ಟಹಾಸ ಮೆರೆದಿರುವ ಘಟನೆಯನ್ನು ಪ್ರತಿಪಕ್ಷ ಜೆಡಿಎಸ್ ಖಂಡಿಸಿದೆ.

ಭುವನೇಶ್ವರಿ ಮೂರ್ತಿ ಮೆರವಣಿಯಲ್ಲಿ ಯುವಕರು ನೃತ್ಯ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಜೆಡಿಎಸ್ ಆರೋಪಿಸಿದೆ.

ಕನ್ನಡ ರಾಜ್ಯೋತ್ಸವದ ಶುಭದಿನದಂದೇ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಪುಂಡರು ಕರಾಳ ದಿನಾಚರಣೆ ಮೆರವಣಿಗೆಗೆ ಕಾಂಗ್ರೆಸ್ ಸರ್ಕಾರ ಅವಕಾಶ ನೀಡಿದ್ದು, ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಾರ್ಯಕರ್ತರು ಕರಾಳ ದಿನ ಆಚರಿಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ನಾಡದ್ರೋಹಿಗಳ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ದುಷ್ಕತ್ಯಕ್ಕೆ ಪ್ರೇರಣೆ ನೀಡಿದಂತಿದೆ ಎಂದು ಜೆಡಿಎಸ್ ತನ್ನ ‘X’ ಖಾತೆಯಲ್ಲಿ ಬರೆದುಕೊಂಡಿದೆ.

ಬೆಳಗಾವಿಯಲ್ಲಿ ಸಂಭವಿಸಿರುವ ಈ ದುರ್ಘಟನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. MES ಪುಂಡಾಟವನ್ನು ಮಟ್ಟಹಾಕಬೇಕು.‌ ನಾಡದ್ರೋಹಿಗಳ ಬಲಿ ಹಾಕಬೇಕು ಎಂದು ವಿರೋಧ ಪಕ್ಷದಲ್ಲಿದ್ದಾಗ
ವೀರಾವೇಶದ ಮಾತುಗಳನ್ನು ಆಡುತ್ತಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈಗ ಹೇಡಿಯಂತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದೆ.

ಕನ್ನಡದ್ರೋಹಿ, ನಾಡದ್ರೋಹಿಗಳ‌ನ್ನು ಮಟ್ಟಹಾಕದೇ, ಅವರು ನಮ್ಮವರೇ ಎಂದು ಸಿಎಂ, ಡಿಸಿಎಂ ಮೃದು ಧೋರಣೆ ತೋರುತ್ತಿರುವುದು, ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂತೆ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದೆ.

Related posts