ಬೆಂಗಳೂರು: ಬಿಬಿಎಂಪಿ ಕಾಮಗಾರಿ ವಿಳಂಬದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿವೆ. ಅದರಲ್ಲೂ ಚರಂಡಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದೆ ಇದ್ದುದರಿಂದಾಗಿ ಉದ್ಯಾನನಗರಿಯ ಹಲವೆಡೆ ಸಾರ್ವಜನಿಕರು ಆತಂಕದಲ್ಲಿ ಸಿಲುಕುವಂತಾಗಿದೆ. ಬೆಂಗಳೂರಿನಾದ್ಯಂತ ಈ ರೀತಿಯ ಸನ್ನಿವೇಶ ಕಂಡುಬರುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಅನನ್ಯ ಸನ್ನಿವೇಶಕ್ಕೆ N.S.Palya ಸಾಕ್ಷಿಯಾಯಿತು.
ರಾಜಧಾನಿ ಬೆಂಗಳೂರಿನಲ್ಲಿ ಚರಂಡಿ ದುರಸ್ತಿ ಹಾಗೂ ಪಾದಚಾರಿ ಮಾರ್ಗಗಳ ಕಾಮಗಾರಿ ನಡೆಯುತ್ತಿದೆಯಾದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಈ ರೀತಿಯ ಅವಾಂತರಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಿಕ್ಕಿದ್ದೇ ತಡ, ತಮ್ಮ ಆಪ್ತರನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುತ್ತಿರುವ ಸಚಿವರ ನಡೆ ಗಮನಸೆಳೆದಿದೆ.
ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 181ರ ಎನ್.ಎಸ್.ಪಾಳ್ಯ 7ನೇ ಮುಖ್ಯರಸ್ತೆ ಬಳಿ ಚರಂಡಿ ದುರಸ್ತಿ ಕಾಮಗಾರಿ ಕೈಗೊಂಡಿರುವ ಬಿಬಿಎಂಪಿ, ಕಳೆದ ನಾಲ್ಕೈದು ತಿಂಗಳಿನಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಫೂಟ್ ಪಾತ್ ಮಧ್ಯೆ ದೊಡ್ಡ ಕಂದಕಗಳನ್ನು ಮುಚ್ಚದೆ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಪಾದಚಾರಿಗಳು ಚರಂಡಿಗೆ ಬಿದ್ದು ಗಾಯಗೊಂಡಿರುವ ಘಟನೆಗಳು ಸಂಭವಿಸಿವೆ.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ನೊಂದ ಸಾರ್ವಜನಿಕರು ಶನಿವಾರ ಸ್ಥಳೀಯ ಶಾಸಕರಾದ ರಾಮಲಿಂಗಾ ರೆಡ್ಡಿ ಅವರಿಗೆ ವಾಟ್ಸಾಪ್ ಮೂಲಕ ಫೋಟೋ ಕಳುಹಿಸಿ ಸಮಸ್ಯೆ ಬಗ್ಗೆ ಗಮನಸೆಳೆದಿದ್ದಾರೆ. ತಮಗೆ ಸಂದೇಶ ತಲುಪಿದ 10 ನಿಮಿಷಗಳಲ್ಲೇ ಸ್ಥಳೀಯ ವಾರ್ಡ್ ಪ್ರೆಸಿಡೆಂಟ್ ನಾಗರಾಜ್ ಅವರನ್ನು ಘಟನಾ ಸ್ಥಳಕ್ಕೆ ಕಳುಹಿಸಿ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಚಿವರ ನಿರ್ದೇಶನದಂತೆ ಅಖಾಡಕ್ಕಿಳಿದ ವಾರ್ಡ್ ಪ್ರೆಸಿಡೆಂಟ್ ನಾಗರಾಜ್, ಜೆಸಿಬಿಯನ್ನು ಸ್ಥಳಕ್ಕೆ ತರಿಸಿ ತಾತ್ಕಾಲಿಕ ದುರಸ್ತಿ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಕ್ಷೇತ್ರದಲ್ಲಿ ಫೂಟ್ ಪಾತ್ ಅವಾಂತರದಿಂದಾಗಿ ಸಂಕಷ್ಟಕ್ಕೊಳಗಾದವರ ಮನೆಗಳಿಗೆ ತೆರಳಿ ಯೋಗಕ್ಷೇಮ ವಿಚಾರಿಸಬೇಕೆಂದೂ ಅಧಿಕಾರಿಗಳಿಗೆ ಹಾಗೂ ತಮ್ಮ ಪಕ್ಷದ ನಾಯಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಚನೆ ನೀಡಿದ್ದಾರೆ. ಅಭಿವೃದ್ಧಿ ಕಾಮಗಾರಿ ಜನರ ಬದುಕಿಗೆ ಸಂಚಕಾರ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ತಾಕೀತು ಮಾಡಿದ್ದಾರೆ.