ಅಕ್ರಾ (ಘಾನಾ): ಐದು ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಘಾನಾ ದೇಶದ ಪ್ರವಾಸ ವೇಳೆ ಗಮನಸೆಳೆದಿದ್ದಾರೆ. ಘಾನಾ ದೇಶದ ಸರ್ಕಾರ ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಆಫೀಸರ್ ಆಫ್ ದ ಆರ್ಡರ್ ಸ್ಟಾರ್ ಆಫ್ ಘಾನಾ’ ಪ್ರಶಸ್ತಿಯನ್ನು ಮೋದಿಯವರಿಗೆ ನೀಡಿ ಗೌರವಿಸಿದೆ.
ಐದು ದೇಶಗಳ ಪ್ರವಾಸದಲ್ಲಿ ಮೋದಿ ಅವರು ಭೇಟಿ ನೀಡಿದ ದೇಶವೇ ಘಾನಾ. ಗುರುವಾರ ಪ್ರಧಾನಿ ತಲುಪಿದ ವೇಳೆಗೆ ಅಕ್ರಾದಲ್ಲಿನ ವಿಮಾನ ನಿಲ್ದಾಣದಲ್ಲಿ ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರು ಸ್ವತಃ ಅವರನ್ನು ಬರಮಾಡಿಕೊಂಡು ಆತ್ಮೀಯವಾಗಿ ಸ್ವಾಗತಿಸಿದರು.
ಮೋದಿಯವರ ವಿಶಿಷ್ಟ ರಾಜಕೀಯ ದೃಷ್ಟಿಕೋನ, ಜಾಗತಿಕ ಮಟ್ಟದ ನಾಯಕತ್ವ ಹಾಗೂ ಭಾರತ–ಘಾನಾ ನಡುವಿನ ದ್ವೈಪಕ್ಷೀಯ ಸಂಬಂಧಗಳನ್ನು ಬಲಪಡಿಸಿರುವ ಕೊಡುಗೆಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಘಾನಾದ ಅಧ್ಯಕ್ಷರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, “ಈ ಗೌರವವನ್ನು 140 ಕೋಟಿ ಭಾರತೀಯರ ಪರವಾಗಿ ಸ್ವೀಕರಿಸುತ್ತೇನೆ. ವಿಶೇಷವಾಗಿ ಭಾರತದ ಯುವಜನತೆ, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ” ಎಂದರು.
ಎರಡು ದಿನಗಳ ಘಾನಾ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಅವರು ಗುರುವಾರ ರಾತ್ರಿ ಟ್ರಿನಿಡಾಡ್ ಮತ್ತು ಟೊಬಾಗೊ ಪ್ರವಾಸಕ್ಕೆ ತೆರಳಿದರು.