ದೆಹಲಿ: ಕೊರೋನಾ ತೊಲಗಿಸಲು ಭಾನುವಾರ ಮನೆ ಮನೆಗಳಲ್ಲಿ ದೀಪ ಬೆಳಗಿಸಿ. ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ನನಗೆ ಬೇಕು. ಆ ಸಮಯದಲ್ಲಿ ನೀವು ದೇಶಕ್ಕಾಗಿ ಬೆಳಕು ಕೊಡಿ ಎಂದು ಭಾರತೀಯರಲ್ಲಿ ಕೋರಿದ್ದಾರೆ.
ಇಡೀ ದೇಶವೇ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸಿದೆ. ಸದ್ಯಕ್ಕೆ ಈ ಸೋಂಕನ್ನು ಗುಣಪಡಿಸಬಲ್ಲ ಪರಿಣಾಮಕಾರಿ ಔಷಧಿಯೇ ಇಲ್ಲದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಈ ಸೋಂಕಿನಿಂದ ದೂರವಿರಲು ಸಾಧ್ಯ. ಈ ಸೂತ್ರವನ್ನು ಅನುಸರಿಸುವ ಉದ್ದೇಶದಿಂದಲೇ ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್’ಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ದೇಶಕ್ಕೆ ಮತ್ತೊಂದು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ.. ಕೊರೋನಾ ಹೊಡೆತ: ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗುತ್ತದೆಯೇ?
ದೇಶದ ಜನರಿಗೆ ವೀಡಿಯೋ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈ ವರೆಗೂ ಕೊರೋನಾ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದೀರಿ. ಇದೀಗ ನನ್ನದು ಮಾತೊಂದು ಕೋರಿಕೆ ಎಂದ ಪ್ರಧಾನಿಯವರು, ಈ ಬಾರಿ ಬೆಳಕಿನ ಮೂಲಕ ನಾವು 130 ಕೋಟಿ ಜನ ಏಕತೆಯನ್ನು ಪ್ರದರ್ಶಿಸೋಣ ಎಂದರು.
ಏಪ್ರಿಲ್ 5 ರಂದು ಎಲ್ಲರೂ ನಮ್ಮ ಮನೆಯಲ್ಲಿ ಕರೆಂಟ್ ಆಫ್ ಮಾಡಿ, ಬಾಗಿಲ ಬಳಿ ಜ್ಯೋತಿ ಬೆಳಗಿಸೋಣ. ದೀಪ, ಮೆಂಬತ್ತಿ ಅಥವಾ ಟಾರ್ಚ್ ಬೆಳಗಿಸೋಣ. ಅದ್ಯಾವುದೂ ಇಲ್ಲವಾದರೆ ಮೊಬೈಲ್ ಟಾರ್ಚ್ ಬೆಳಗಿಸಿ. ಈ ಮೂಲಕ ಕೊರೋನಾವನ್ನು ಓಡಿಸಲು ಬದ್ಧರಾಗೋಣ ಎಂದರು. ಆದರೆ ಲಾಕ್ ಡೌನ್ ಬಗ್ಗೆಯಾಗಲೀ, ಯಾವುದೇ ಯೋಜನೆ ಬಗ್ಗೆಯಾಗಲೀ ಪ್ರಸ್ತಾಪಿಸಿಲ್ಲ.
ದೇಶಕ್ಕೆ ಕೊರೋನಾ ಅಂಟಿಕೊಂಡ ನಂತರ ಇದು ಮೋದಿಯವರದ್ದು ಮೂರನೇ ಕರೆ. ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ ದೇಶಾದ್ಯಂತ ಜನತಾ ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದರು. ಎರಡನೇ ಬಾರಿಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿ ರಾಷ್ಟ್ರಾದ್ಯಂತ ಲಾಕ್ ಡೌನ್’ಗೆ ಕಾರ್ ನೀಡಿದ್ದರು. ಇದೀಗ ದೀಪಾರಾಧನೆಗೆ ಕರೆ ಕೊಟ್ಟಿದ್ದಾರೆ. ದೀಪಾವಳಿ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಸೂತ್ರ ಪ್ರಧಾನಿಯವರದ್ದು.