ಯುಕೆಗೆ ಹೊಸ ಭಾರತೀಯ ಹೈಕಮಿಷನರ್; ಲಂಡನ್ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸ್ವಾಗತ

ಲಂಡನ್ (ಯುನೈಟೆಡ್ ಕಿಂಗ್‌ಡಮ್): ಯುನೈಟೆಡ್ ಕಿಂಗ್‌ಡಮ್‌ಗೆ ಭಾರತದ ಹೊಸ ಹೈಕಮಿಷನರ್ ಆಗಿ ನೇಮಕಗೊಂಡಿರುವ ಪೆರಿಯಸಾಮಿ ಕುಮಾರನ್ ಅವರಿಗೆ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಆತ್ಮೀಯ ಸ್ವಾಗತ ಕೋರಿದೆ.

ಫೌಂಡೇಶನ್ ಮುಖ್ಯಸ್ಥರೂ, ಲಂಡನ್‌ನ ಮಾಜಿ ಮೇಯರ್‌ ಆಗಿರುವ ಡಾ. ನೀರಜ್ ಪಾಟೀಲ್ ಅವರು ಮಾತನಾಡಿ, 2005ರಿಂದ 2007ರವರೆಗೆ ಬೆಂಗಳೂರಿನಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕುಮಾರನ್ ಅವರ ಕರ್ನಾಟಕದೊಂದಿಗಿನ ಸಂಪರ್ಕವನ್ನು ವಿಶೇಷವಾಗಿ ಉಲ್ಲೇಖಿಸಿದರು.

ಈ ಪ್ರದೇಶದ ಬಗ್ಗೆ ಅವರ ಅನುಭವ ಮತ್ತು ತಿಳುವಳಿಕೆ ಭಾರತ–ಯುನೈಟೆಡ್ ಕಿಂಗ್‌ಡಮ್ ನಡುವಿನ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದೇ ವೇಳೆ, ನಿರ್ಗಮಿತ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ಏಪ್ರಿಲ್ 30, 2025ರಂದು ಭಗವಾನ್ ಬಸವೇಶ್ವರರಿಗೆ ಸಲ್ಲಿಸಿದ ಗೌರವವನ್ನು ಸ್ಮರಿಸಿ, ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲಾಯಿತು. ಬ್ರಿಟಿಷ್ ಹಿಂದೂ ಸಮುದಾಯದೊಂದಿಗೆ ಅವರು ಬೆಳೆಸಿದ ಬಾಂಧವ್ಯವನ್ನು ಫೌಂಡೇಶನ್ ಪ್ರಶಂಸಿಸಿದೆ.

ವಿಕ್ರಮ್ ದೊರೈಸ್ವಾಮಿ ಅವರು ಚೀನಾಕ್ಕೆ ಭಾರತದ ಹೈಕಮಿಷನರ್ ಆಗಿ ಹೊಸ ಜವಾಬ್ದಾರಿ ವಹಿಸಿರುವ ಹಿನ್ನೆಲೆಯಲ್ಲಿ, ಅವರ ಮುಂದಿನ ರಾಜತಾಂತ್ರಿಕ ಜೀವನಕ್ಕೂ ಶುಭ ಹಾರೈಸಲಾಯಿತು.

Related posts