ಚಿಕ್ಕಬಳ್ಳಾಪುರ: ಕೊರೋನಾ ಇಡೀ ರಾಜ್ಯವನ್ನು ಆವರಿಸಿಕೊಂಡಿದ್ದು, ಶಾಲಾ ಕಾಲೇಜು ಆರಂಭಕ್ಕೆ ಗ್ರಹಣ ಆವರಿಸಿದೆ. ಇದೇ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಕುರಿತಂತೆ ತೀವ್ರ ಚರ್ಚೆಯೂ ಸಾಗಿದೆ. ಪುಟ್ಟ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸೂಕ್ತವಲ್ಲ ಎಂದು ತಜ್ಞರು ಹೇಳಿದರೆ, ಹಲವಾರು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಶಿಕ್ಷಣ ಬೇಕು ಎಂದು ಹೇಳುತ್ತಿದ್ದಾರೆ.
ಆನ್ಲೈನ್ ಶಿಕ್ಷಣ ಬೇಕು ಎಂದು ಕೆಲವು ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದು ರಾಜ್ಯ ಸರ್ಕಾರದ ವಿರುದ್ಧ ಸಮರ ಕೈಗೊಂಡಿದ್ದಾರೆ. ಇದೆ ವೇಳೆ ಕೇಂದ್ರ ಸರ್ಕಾರ ಕೂಡಾ ಮಾರ್ಗಸೂಚಿ ಸಿದ್ದಪಡಿಸಿ ಕುತೂಹಲಕಾರಿ ಹೆಜ್ಜೆ ಇಟ್ಟಿದೆ.
ಈ ನಡುವೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಪದ್ಧತಿ ಅನುಷ್ಟಾನಕ್ಕೆ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು ರಾಜ್ಯದ ಪರಿಸ್ಥಿತಿ ಆಧರಿಸಿ, ತಜ್ಞರ ಅಭಿಪ್ರಾಯ ಪಡೆದು, ಯಾವ ರೀತಿಯಲ್ಲಿ ಆನ್ ಲೈನ್ ಶಿಕ್ಷಣ ಜಾರಿಗೆ ತರಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.