‘ಆಪರೇಷನ್ ಸನ್ ಸೆಟ್’; ಪೊಲೀಸರ ಹೊಸ ವರಸೆಗೆ ಶಹಬ್ಬಾಸ್‌ಗಿರಿ..

ಉಡುಪಿ: ಭೂಗತ ಪಾತಕಿಗಳ ಕಾರಸ್ಥಾನವೆನಿಸಿರುವ ಕರಾವಳಿಯಲ್ಲಿ ಪೊಲೀಸ್ ಫೋರ್ಸ್ ಬಿಗಿಗೊಂಡಿದೆ. ಅಪರಾಧಗಳನ್ನು ಮಟ್ಟಹಾಕಲು, ಅಪಾರಾಧಿಗಳಿಗೆ ಅಂಕುಶ ಹಾಕಲು ಕ್ರಿಯಾಶೀಲ ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ (Hakay Akshay Machhindra IPS) ಕೈಗೊಂಡ ನಿನೂತನ ಪ್ರಯೋಗ ಸಾರ್ವಜನಿಕ ವಲಯದಲ್ಲಿ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದೆ.

ಹೇಳಿ ಕೇಳಿ ಕಾರಾವಳಿ ಜಿಲ್ಲೆಗಳು ಅಂತಾರಾಷ್ಟ್ರೀಯ ಭೂಗತ ಪಾತಕಿಗಳ ಜೊತೆ ನಂಟು ಹೊಂದಿರುವ ಪಂವಾದವನ್ನು ಅಂಟಿಸಿಕೊಂಡಿರುವ ಪ್ರದೇಶ ಎಂಬುದು ಪೊಲೀಸ್ ಇತಿಹಾಸದಲ್ಲಿ ಕೇಳಿಬರುತ್ತಿರುವ ಕಹಿ ಸತ್ಯ. ಹಾಗಾಗಿ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳ ಘಟನೆಗಳು ರಾಷ್ಟ್ರೀಯ ನಟ್ಟದಲ್ಲಿ ಸುದ್ದಿಯಾಗುತ್ತಿರುತ್ತವೆ. ಇದೀಗ ಯುವಜನರನ್ನು ಅಪರಾಧ ಜಗತ್ತಿನಿಂದ ವಿಮುಖಗೊಳಿಸಲು ಉಡುಪಿ ಎಸ್ಪಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅದೇ ಸಂದರ್ಭದಲ್ಲಿ ಅವರು ‘ಆಪರೇಷನ್ ಸನ್ ಸೆಟ್’ (Operation Sun Set)  ಎಂಬ ವಿಶಿಷ್ಟ ಕಾರ್ಯಾಚರಣೆಗೆ ಮುನ್ನುಡಿ ಬರೆದ ವೈಖರಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ.

ಏನಿದು ಆಪರೇಷನ್ ಸನ್ ಸೆಟ್..?

ಪೊಲೀಸ್ ಇತಿಹಾಸದಲ್ಲಿ ಆಪರೇಷನ್ ಸನ್ ಸೆಟ್ ಹೊಸದೇನಲ್ಲ. ಸಂಜೆ ನಡೆಯುವ ಕಾರ್ಯಾಚರಣೆಗೆ ನೀಡಿದ ಹೊಸರೂಪವಷ್ಟೇ. ಈ ಹೊಸ ಪದ ಪ್ರಯೋಗದಲ್ಲಿ ಕಾರ್ಯಾಚರಣೆ ನಡೆದದ್ದು ಉಡುಪಿಯಲ್ಲೇ ಮೊದಲು. ಸಂಜೆಯ ಹೊತ್ತಲ್ಲಿ ಯುವಜನರ ಸ್ವಚ್ಚಂದ ವಿಹಾರದ ನಡು-ನಡುವೆ ಅಪರಾಧ ಪ್ರಜ್ಞೆಯ ಮಂದಿ ತಾಳ ತಪ್ಪುವುದು ಸರ್ವೇ ಸಾಮಾನ್ಯ. ಇಂತಹಾ ಕೃತ್ಯಗಳನ್ನು ತಡೆಯಲು ಪೊಲೀಸರು ಸಂಜೆಯ ಹೊತ್ತಲ್ಲಿ ಅಖಾಡಕ್ಕಿಳಿಯುತ್ತಾರೆ. ಇದೇ ಕಾರ್ಯಾಚರಣೆಯನ್ನು ಜಾಗೃತಿ ಅಭಿಯಾನದ ರೂಪದಲ್ಲಿ ಕೈಗೊಳ್ಳಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರು ವಿನೂತನ ರೂಪ ನೀಡಿದ್ದಾರೆ.

ಸಂಜೆಯಾಗುತ್ತಿದ್ದಂತೆ ಏಕಾಏಕಿ ನೂರಾರು ಪೊಲೀಸರು ಎಲ್ಲೆಂದರಲ್ಲಿ ಜಮಾಯಿಸುತ್ತಾರೆ. ದಿಢೀರನೆ ಪರಿಶೀಲನೆ ನಡೆಸುವುದು. ಕ್ಷಿಪ್ರ ತಪಾಸಣೆ ನಡೆಸುತ್ತಾರೆ. ಹೀಗೆ ನಾನಾ ಅವತಾರಗಳಲ್ಲಿ ಖಾಕಿ ಸೈನ್ಯ ಜನರ ಮುಂದೆ ಪ್ರತ್ಯಕ್ಷವಾಗಿ ಸಂಚಲನ ಮೂಡಿಸುತ್ತದೆ. 

ಈ ಕಾರ್ಯಾಚರಣೆ ಹೇಗಿರುತ್ತದೆ ಎಂದರೆ ಎಲ್ಲೂ ಯಾವ ಪೊಲೀಸ್ ಕೂಡಾ ಅತಿರೇಕದಿಂದ ವರ್ತಿಸಲ್ಲ, ವಾಗ್ವಾದದ ಸನ್ನಿವೇಶ ಸೃಷ್ಠಿಸಲ್ಲ, ವರಿಷ್ಠರಿಗೆ ದೂರು ನೀಡುವ ಯಾವುದೇ ಪ್ರಮೇಯದ ಪ್ರಸಂಗಕ್ಕೆ ಅವಕಾಶವೇ ಇರಲ್ಲ.

ಪ್ರಸ್ತುತ, ಪೊಲೀಸರೆಂದರೆ ಕೃತ್ಯಗಳು ನಡೆದ ನಂತರ ಕಾನೂನು ಕ್ರಮ ಕೈಗೊಳ್ಳುವವರು ಎಂಬಂತಿದೆ. ಆದರೆ ಪೊಲೀಸ್ ಎಂದರೆ ಅಪರಾಧ ಘಟಿಸದಂತೆ ಸಮಾಜವದಲ್ಲಿ ಸುರಕ್ಷೆಯ ಕ್ರಮವನ್ನು ಅನುಸರಿಸುವುದಾಗಿದೆ. ಈ ಅರ್ಥವನ್ನು ಪರಿಪೂರ್ಣವಾಗಿಸಲು ಎಸ್ಪಿ ಮಚ್ಚಿಂದ್ರ ಅವರು ಮುನ್ನುಡಿ ಬರೆದಿರುವ ‘ಆಪರೇಷನ್ ಸನ್ ಸೆಟ್’ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಉಡುಪಿ ಜಿಲ್ಲೆಯ ಎಲ್ಲಾ ಉಪವಿಭಾಗಗಳಲ್ಲಿ ವಾರಾಂತ್ಯದ ಶನಿವಾರ ಈ ಆಪರೇಷನ್ ಸನ್ ಸೆಟ್’ ನಡೆದಿದೆ. ಅದರಲ್ಲೂ ಉಡುಪಿ ನಗರದಲ್ಲಿ ಈ ಕಾರ್ಯಾಚರಣೆಯು ನಾಗರಿಕ ವಲಯದಲ್ಲಿ ಸಂಚಲನ ಮೂಡಿಸಿತು. ಅಪರಾಧ ಜಗತ್ತಿಗೆ ಎಚ್ಚರಿಕೆಯ ಸಂದೇಶವನ್ನೇ ರವಾನಿಸಿದೆ.

‘ಆಪರೇಷನ್ ಸನ್ ಸೆಟ್’ ಹೈಲೈಟ್ಸ್ ಹೀಗಿದೆ:

  • ಸಂಜೆ 7 ರಿಂದ 11 ಗಂಟೆಯವರೆಗೆ ವಿಶೇಷ ಕಾರ್ಯಾಚರಣೆ

  • ಎಲ್ಲಾ ಪೊಲೀಸ್ ಅಧಿಕಾರಿಗಳ, ಸಿಬಂದಿಯ ವಿಶೇಷ ತಂಡಗಳ ಕಾರ್ಯಾಚರಣೆ.. 

  • ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ ರಚನೆ

  • ಎಲ್ಲಾ.ವಾಹನಗಳ ತಪಾಸಣೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣಗಳು ದಾಖಲು..

  • ಸಾರ್ವಜನಿಕರಿಗೆ ತೊಂದರೆ ಕೊಡುವವರ ಬಗ್ಗೆ ನಿಗಾ..

  • ನಿರ್ಬಂಧಿತ ಪ್ರದೇಶಗಳಲ್ಲಿ ತಂಬಾಕು, ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ..

  • ಇ-ಸಿಗರೇಟ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಹಠಾತ್ ದಾಳಿ.‌.

  • ಕ್ಷಿಪ್ರ ತಪಾಸಣೆ ವೇಳೆ ಗಾಂಜಾ, ಡ್ರಗ್ಸ್ ಮಾಫಿಯಾಗಳಿಗಾಗಿ ಬೇಟೆ.. ಅಕ್ರಮ ಮದ್ಯ ಮಾರಾಟಕ್ಕೂ ಬ್ರೇಕ್..

  • ಕಳ್ಳತನ ಪ್ರಕರಣಗಳನ್ನೂ ಬೇಧಿಸುವ ಪ್ರಯತ್ನ..

  • ಮೋಟರು ವಾಹನ ಕಾಯ್ದೆ ಉಲ್ಲಂಘನೆಗೂ ಬ್ರೇಕ್.‌

  • ಪ್ರಮುಖವಾಗಿ ರೌಡಿಗಳ ಚಲನವಲನಗಳ ಬಗ್ಗೆಯೂ ಹದ್ದಿನ ಕಣ್ಣು..

  • ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲೇ 45ಕ್ಕೂ ಹೆಚ್ಚು ಅಧಿಕಾರಿಗಳು, 450ಕ್ಕೂ ಹೆಚ್ಚು ಪೊಲೀಸರು ಭಾಗಿ.

ಪೊಲೀಸ್ ಇತಿಹಾಸದಲ್ಲೇ ಈ ರೀತಿಯ ಕಾರ್ಯಚರಣೆ ಅಪರೂಪದಲ್ಲಿ ಅಪರೂಪದ್ದಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಶನಿವಾರದ ಮೊದಲ ಕಾರ್ಯಾಚರಣೆ ಸಂದರ್ಭದಲ್ಲೇ ಗಾಂಜಾ ಹಾಗೂ ಎಂಡಿಎಂಎ ಹೊಂದಿದ್ದ ಮೂವರನ್ನು ಬಂಧಿಸಲಾಗಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ. 45 ಲೀಟರ್ ಮದ್ಯ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಳ್ಳತನ ಪ್ರಕರಣಗಳನ್ನು ಬೇಧಿಸುವ ಪ್ರಯತ್ನವೂ ನಡೆದಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳ ಸಹಾಯದಿಂದ, 60ಕ್ಕೂ ಹೆಚ್ಚು ಕಳ್ಳತನ ಆರೋಪಿಗಳನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆ ಎಂದವರು ತಿಳಿಸಿದ್ದಾರೆ.‌

ಮೋಟರ್ ವಾಹನ ಕಾಯ್ದೆ ಪ್ರಯೋಗಿಸಿ 32 ಪ್ರಕರಣಗಳನ್ನು ದಾಖಲಿಸಲಾಗಿದ್ದು, 29 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ 258 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದಿರುವ ಅವರು, ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ಸೇವಿಸಿದವರ ವಿರುದ್ಧ 17 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದಿದ್ದಾರೆ‌. ಅಪರಾಧಿಗಳ ಪತ್ತೆಯಷ್ಟೇ ಅಲ್ಲ, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬುವ ಸಂಬಂಧ ಅಭಿಯಾನ ರೂಪದಲ್ಲಿ ಕೈಗೊಂಡ ‘ಆಪರೇಷನ್ ಸನ್ ಸೆಟ್’ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.

Related posts