ಬೆಂಗಳೂರು: ಮುಡಾ ಹಗರಣ ವಿಚಾರದಲ್ಲಿ ಸೈಟ್ ಹಿಂದಿರುಗಿಸಿದರೂ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸುತ್ತಿರುವ ಬಿಜೆಪಿಗೆ ಸಿದ್ದು ಸಂಪುಟದ ಸಚಿವರು ಎದಿರೇಟು ನೀಡಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ದದ ಡಿನೊಟಿಫಿಕೇಶನ್ ಹಗರಣ ಆರೋಪ ಮುಂದಿಟ್ಟು ಕಾಂಗ್ರೆಸ್ ನಾಯಕರು ಬಿಜೆಪಿಯನ್ನೂ ಮುಜುಗರಕ್ಕೆ ಸಿಲುಕಿಸುವ ಪ್ರಯತ್ನ ನಡೆಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸಚಿವರಾದ ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ನಡೆಸಿದ ಜಂಟಿ ಸುದ್ದಿಗೋಷ್ಠಿ ವಿದ್ಯಮಾನಗಳ ಕೇಂದ್ರಬಿಂದುವಾಯಿತು.
ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರವಾಗಿ ಬಂದಿದ್ದ 14 ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಬೇರೆ ಅರ್ಥ ಕಲ್ಪಿಸಿ, ತಪ್ಪು ಮಾಡಿರುವ ಕಾರಣ ವಾಪಸ್ ನೀಡಿದ್ದೀರಿ ಎಂದು ಆರೋಪ ಮಾಡಿದ್ದಾರೆ ಎಂದರು.
ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಭೂ ಹಗರಣದ ಬಗ್ಗೆ ದಾಖಲೆ ಸಮೇತ ಮುಂದೆ ಇಟ್ಟ ಸಚಿವರು, ಸರ್ವೇ ನಂಬರ್ 10/1, 10/11 F1 ಹಾಗೂ 10/11 F2 ಜಾಗದಲ್ಲಿ 32 ಗುಂಟೆ ಜಮೀನನ್ನು ಬಿಡಿಎ 24-02-1977 ರಲ್ಲಿ ಬಿಡಿಎ ನೋಟಿಫಿಕೇಶನ್ ಮಾಡುತ್ತದೆ. 27-2-1977 ರಲ್ಲಿ ಮತ್ತೊಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ. 31-8-1978 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ನಂತರ 26-02-2003 ಹಾಗೂ 2007 ರಲ್ಲಿ ಜಮೀನಿನ ಮೂಲ ಮಾಲೀಕರಾದ ರಾಮಸ್ವಾಮಿ ಅವರಿಂದ ಆರ್ ಅಶೋಕ್ ಅವರು ಈ ಜಮೀನನ್ನ ಶುದ್ಧ ಕ್ರಯದ ಮೂಲಕ ಖರೀದಿ ಮಾಡುತ್ತಾರೆ ಎಂದು ಆರೋಪಿಸಿದರು.
ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಅರ್ಜಿಯ ಮೇಲೆ ಕೂಡಲೇ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಕಡತ ಮಂಡನೆಯಾದ ಎರಡು ತಿಂಗಳಲ್ಲಿ ಭೂಸ್ವಾಧೀನ ಕೈಬಿಡಲಾಗುತ್ತದೆ. ಡಿನೋಟಿಫಿಕೇಷನ್ ನಂತರ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ನಂತರ ಇದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಂತರ ಆರ್. ಅಶೋಕ್ ಅವರು ಈ ಜಮೀನು ಹಿಂತಿರುಗಿಸಲು ತೀರ್ಮಾನಿಸುತ್ತಾರೆ. 27-08-2011ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ನೀಡುತ್ತಾರೆ ಎಂದು ವಿವಾದ ಬಗ್ಗೆ ಮಾಹಿತಿ ನೀಡಿದರು.
ಹೈಕೋರ್ಟ್ ಮೆಟ್ಟಿಲೇರಿ ನಂತರ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಅರವಿಂದ್ ಕುಮಾರ್ ಅವರು ವಿಚಾರಣೆ ಮಾಡಿ ತೀರ್ಪು ನೀಡುತ್ತಾರೆ. ಈ ತೀರ್ಪಿನಲ್ಲಿ ಈ ಭೂಮಿಯು ಬಿಡಿಎ ಅಧೀನದಲ್ಲಿರುವ ಕಾರಣ ಕ್ರಿಮಿನಲ್ ಮೊಕದ್ದಮೆ ಹೂಡುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗುತ್ತದೆ ಎಂದು ಗಮನಸೆಳೆದ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ತಮಗೆ ಪರಿಹಾರವಾಗಿ ಬಂದ ನಿವೇಶನ ವಾಪಸ್ ನೀಡಿರುವುದಕ್ಕೆ ನೀವು ಆಡುತ್ತಿರುವ ಮಾತುಗಳು ಹಾಗೂ ಈ ತೀರ್ಪನ್ನು ನೀವು ಯಾವ ರೀತಿ ಅರ್ಥೈಸುತ್ತೀರಿ? ಇದರ ಬಗ್ಗೆ ಜನರಿಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ಆರ್ ಅಶೋಕ್ ಅವರ ಹೇಳಿಕೆ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಿಡಿಎ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ಬಿಡಿಎಗೆ ವಾಪಸ್ ನೀಡಿರುವವರು ತಮ್ಮ ಅನುಭವದ ಮಾತನ್ನು ಈಗ ಆಡುತ್ತಿದ್ದಾರೆ ಎಂದು ದೂರಿದರು.
ನೀವು ಮಾಡಿದ್ದು ಸರಿಯಾದರೆ, ಪಾರ್ವತಮ್ಮ ಅವರು ಮಾಡಿದ್ದರಲ್ಲಿ ತಪ್ಪು ಹೇಗಾಗುತ್ತದೆ? ಅನವಶ್ಯಕವಾಗಿ ತಪ್ಪು ಹೇರಿ, ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು. ನೀವು ನಿಮ್ಮದಲ್ಲದ ಭೂಮಿಯನ್ನು ಬಿಡಿಎಗೆ ಹಿಂಪಡೆಯುತ್ತೀರಿ, ಮೂಡಾ ಸಂಸ್ಥೆಯಿಂದ ಪರಿಹಾರವಾಗಿ ಬಂದ ಪಾರ್ವತಿಯವರು ಹಿಂದಿರುಗಿಸಿದರೆ ಅದನ್ನು ತಪ್ಪು ಎನ್ನುತ್ತೀರಾ? ಎಂದು ಹೆಚ್.ಕೆ.ಪಾಟೀಲ್ ಪ್ರಶ್ನಿಸಿದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಈ ಜಾಗ ಡಾಲರ್ಸ್ ಕಾಲೋನಿ 2ನೆ ಹಂತದ ಆರ್ ಎಂ ವಿ ಬಡಾವಣೆ ಹಾಗೂ ವರ್ತುಲ ರಸ್ತೆ ಬಳಿ ಇದೆ. ಈ ಪ್ರದೇಶವನ್ನು ಬಿಡಿಎ 1977 ಹಾಗೂ 1978ರಲ್ಲಿ ವಶಕ್ಕೆ ಪಡೆದಿತ್ತು. ಈ ಜಾಗ ವರ್ತುಲ ರಸ್ತೆಗೆ ಮುಖವಾಗಿದೆ. ಹೀಗಾಗಿ ಈ ಜಮೀನಿನ ಮೌಲ್ಯ ಕೋಟ್ಯಂತರ ರೂಪಾಯಿಯಾಗಿದೆ. 2003ರಲ್ಲಿ ಆರ್ ಅಶೋಕ್ ಅವರು ಶುದ್ಧ ಕ್ರಯ ಹೇಗೆ ಮಾಡಿಕೊಂಡರು? ಇಷ್ಟು ದಿನ ಅಕ್ರಮವಾಗಿ ಜಿಪಿಎ ಮಾಡಿಕೊಂಡಿರುವುದನ್ನು ಕೇಳಿದ್ದೆ, ಆದರೆ ಮೊದಲ ಬಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ಶುದ್ಧ ಕ್ರಯ ಮಾಡಿಕೊಂಡಿರುವ ಪ್ರಕರಣ ನೋಡುತ್ತಿದ್ದೇನೆ. ಬಿಡಿಎ ಸ್ವತ್ತನ್ನು ಖಾಸಗಿ ಅವರಿಂದ ಹೇಗೆ ಖರೀದಿ ಮಾಡಿದರು? ಬಿಡಿಎ ಬಳಿ ಖಾತಾ ಇರುವಾಗ ಗುಳ್ಳಮ್ಮ ಅವರ ವಾರಸುದಾರರಿಂದ ಹೇಗೆ ಖರೀದಿ ಮಾಡಿದರು? ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಮಸ್ವಾಮಿ ಬಿನ್ ವೆಂಕಟಪ್ಪ ಎಂಬವರ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಬೇಕು ಎಂದು ಅರ್ಜಿ ನೀಡುತ್ತಾರೆ. 18-11-2009ರಂದು ಆಗಿನ ಸಿಎಂ ಯಡಿಯೂರಪ್ಪ ಅವರು ಬಿಡಿಎ ಆಯುಕ್ತರು ಕೂಡಲೇ ಕಡತದಲ್ಲಿ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಅದೇ ವರ್ಷ ಡಿಸೆಂಬರ್ 31ಕ್ಕೆ ಅಂದರೆ ಒಂದು ತಿಂಗಳು 12 ದಿನಗಳ ಅಂತರದಲ್ಲಿ ಡಿನೋಟಿಫಿಕೇಷನ್ ಮಾಡುತ್ತಾರೆ. ಸರ್ಕಾರಿ ಜಾಗವನ್ನು 23 ವರ್ಷಗಳ ನಂತರ ಡಿನೋಟಿಫಿಕೇಷನ್ ಮಾಡಿರುವುದು ಅಕ್ರಮ ಅಲ್ಲವೇ? ಎಂದು ಪ್ರಶ್ನಿಸಿದರು.
ಶುದ್ಧ ಕ್ರಯ ಪತ್ರದಲ್ಲಿ ಗುಳ್ಳಮ್ಮ ಎಂಬುವವರ ವಾರಸುದಾರರು ಯಾರು ಎಂದು ನೋಡಿದರೆ, ವಾರಸುದಾರರು ಜಿ.ಶಾಮಣ್ಣ, ಜಿ.ಮುನಿರಾಜು, ಜಿ.ಗೋವಿಂದಪ್ಪ, ಜಿ.ಕಾಂತರಾಜು, ಜಿ. ಸುಬ್ರಮಣ್ಯ ಎಂದು ಇದೆ. ಇಲ್ಲಿ ರಾಮಸ್ವಾಮಿ ಹಾಗೂ ವೆಂಕಟಪ್ಪ ಎಂಬುವವರಿಗೆ ಗುಳ್ಳಮ್ಮ ಎಂಬುವವರು ಹೇಗೆ ಸಂಬಂಧ ಎಂದು ಗೊತ್ತಿಲ್ಲ ಎಂದ ಅವರು, ಮೂಲ ವಾರಸುದಾರರು ಡಿನೋಟಿಫಿಕೇಷನ್ ಗೆ ಅರ್ಜಿಯನ್ನೇ ಕೊಟ್ಟಿಲ್ಲ.ಇವರ ಹೆಸರಲ್ಲಿ ಬೇನಾಮಿ ರಾಮಸ್ವಾಮಿ ಎಂಬುವವರನ್ನು ಸೃಷ್ಟಿ ಮಾಡಲಾಗಿದೆ. ಇದು ಕ್ರಮವೇ? ಅಕ್ರಮವೇ? ಎಂದು ಪ್ರಶ್ನಿಸಿದರು.
ಅಂತಿಮವಾಗಿ ಡಿನೋಟಿಫಿಕೇಷನ್ ಆಗಿದ್ದು ಮುನಿಸ್ವಾಮಪ್ಪ ಬಿನ್ ದೊಡ್ಡಪಿಳ್ಳಪ್ಪ ಎಂಬುವವರಿಗೆ. ಈ ಮುನಿಸ್ವಾಮಪ್ಪ ಬಿನ್ ದೊಡ್ಡಪಿಳ್ಳಪ್ಪ ಎಂಬುವವರು ಯಾರು? ಇನ್ನು ಅಂತಿಮವಾಗಿ ಖಾತೆ ಆಗುವುದು ಆರ್.ಅಶೋಕ್ ಅವರ ಹೆಸರಿಗೆ. ಹೆಜ್ಜೆ ಹೆಜ್ಜೆಗೂ ಅಕ್ರಮ ಮಾಡಿರುವ ಅಶೋಕ್ ಅವರು ಇಂದು ಆಡುತ್ತಿರುವ ಮಾತುಗಳು ನೋಡಿದರೆ ಅಚ್ಚರಿಯಾಗುತ್ತದೆ ಎಂದರು.
ಯಾವುದೇ ತಪ್ಪು ಮಾಡಿಲ್ಲದಿದ್ದರೂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿ, ಬಿಜೆಪಿಯ ಅಸ್ತ್ರದಂತೆ ಇರುವ ಇಡಿ ಸಂಸ್ಥೆಯನ್ನು ಪ್ರಯೋಗಿಸುತ್ತಾರೆ. ಹೀಗಾಗಿ ಇಷ್ಟೆಲ್ಲಾ ಅಕ್ರಮ ಮಾಡಿರುವ ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.