ಪಂಚಮಸಾಲಿ ಸಮುದಾಯಕ್ಕೆ ಗುಡ್ ನ್ಯೂಸ್.. ಯುಗಾದಿಯ ದಿನವೇ ಪ್ರಧಾನಿ ಕಚೇರಿಯಿಂದ ಬಂತು ಭರವಸೆಯ ಕರೆ..!

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿರುವವರಿಗೆ ಪ್ರಧಾನಿ ಕಚೇರಿಯಿಂದ ಸಿಹಿ ಸುದ್ದಿಯೊಂದು ರವಾನೆಯಾಗಿದೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಸಬೇಕೆಂಬ ಹೋರಾಟಕ್ಕೆ ಸ್ಪಂಧಿಸಬೇಕೆಂದು ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಪ್ರಧಾನಿಯವರಿಗೆ ಸಂದೇಶ ರವಾನಿಸಿದ್ದರು. ಈ ಬಗ್ಗೆ ಪ್ರಧಾನಿ ಕಚೇರಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

ಯುಗಾದಿಯ ದಿನದಂದು ಸಂಜೆ ಪ್ರಧಾನಿ ಕಾರ್ಯಾಲಯದಿಂದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಕರೆ ಬಂದಿದ್ಮು, ಮೀಸಲಾತಿ ಕುರಿತ ತಮ್ಮ ಮನವಿಯನ್ನು ಪರಿಶೀಲಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

ಏನಿದು ಅಚ್ಚರಿಯ ಬೆಳವಣಿಗೆ? 

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕುಎಂದು ಒತ್ತಾಯಿಸಿ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹಿಂದೆ ಸಿಎಂ ಬಸವರಾಜ್ ಬೊಮ್ಮಾಯಿಯವರು ಬೇಡಿಕೆ ಈಡೇರಿಸುವುದಾಗಿ ತಾಯಿ ಮೇಲೆ ಆಣೆ ಮಾಡಿ ಭರವಸೆ ನೀಡಿದ್ದಾರೆ ಎಂದು ಹೇಳುತ್ತಿರುವ ಬಸವಜಯ ಮೃತ್ಯುಂಜಯ ಶ್ರೀಗಳು, ಅನಂತರ ಸಿಎಂ ಅವರು ಮಾತು ಮರೆತಿದ್ದಾರೆ ಎಂದು ಅಸಮಾಧಾನಗೊಂಡಿದ್ದಾರೆ. ಇದೀಗ 68 ದಿನಗಳಿಂದ ನಿರಂತರ ಸತ್ಯಾಗ್ರಹ ಕೈಗೊಂಡಿರುವ ಶ್ರೀಗಳು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದರು.

ಅಷ್ಟೇ ಅಲ್ಲ, ಸತ್ಯಾಗ್ರಹ ಸ್ಥಳದಲ್ಲಿ ಹೋರಾಟವನ್ನೇ ಯುಗಾದಿಯನ್ನಾಗಿ ಆಚರಿಸಿರುವ ಶ್ರೀಗಳು, ಪ್ರಧಾನಿ ಕಾರ್ಯಾಲಯ ಮಧ್ಯಸ್ಥಿಕೆ ವಹಿಸಿರುವ ಕಾರಣ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದರು, ಪ್ರಧಾನಿ ಮೋದಿಯವರ ಸಾಮಾಜಿಕ ಕಳಕಳಿಯ ಕಾರಣ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದರು. ಅಚ್ಚರಿ ಎಂಬಂತೆ ಸಂಜೆಯಾಗುತ್ತಿದ್ದಂತೆಯೇ ಪ್ರಧಾನಿ ಕಚೇರಿಯಿಂದ ಭರವಸೆಯ ಕರೆ ಬಂದಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

Related posts