ಸರ್ವೇ ಆಗಿದೆ, ಸರ್ಕಾರಕ್ಕೆ ಮಧ್ಯಂತರ ವರದಿಯೂ ಸಲ್ಲಿಕೆಯಾಗಿದೆ; ಪಂಚಮಸಾಲಿ ಮೀಸಲಾತಿಗೆ ಇನ್ನೇಕೆ ವಿಳಂಬ? ಶ್ರೀಗಳ ಪ್ರಶ್ನೆ

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಘೋಷಿಸುವ ವಿಚಾರದಲ್ಲಿ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ದ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿ ಲಿಂಗಾಯತ ಸಮುದಾಯ ಸುದೀರ್ಘ ಕಾಲದಿಂದ ನಡೆಯುತ್ತಿರುವ ಹೋರಾಟಕ್ಕೆ ಮಣಿದ ಸರ್ಕಾರ ಮುಂದಿನ ನಿರ್ಧಾರವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ನಿರ್ಧಾರಕ್ಕೆ ಬಿಟ್ಟಿದೆ.

ಈ ನಡುವೆ, ಬುಧವಾರ ಆಯೋಗದ ಪ್ರಮುಖರು ನಡೆಸಿದ ವಿಚಾರಣೆ ಕುತೂಹಲದ ಕೇಂದ್ರಬಿಂದುವಾಗಿತ್ತು. ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆಯವರು ಲಿಂಗಾಯತ ಪಂಚಮಸಾಲಿ 2 ಎ ಮೀಸಲಾತಿಗೆ ಸಂಬಂಧಿಸಿದಂತೆ ಬಹಿರಂಗ ವಿಚಾರಣೆಗಾಗಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಆಹ್ವಾನಿಸಿದ್ದರು. ಅದರಂತೆ ಸ್ವಾಮೀಜಿ ಹಾಗೂ ಸಮುದಾಯದ ಪ್ರಮುಖರು‌ ಹಾಜರಾಗಿದ್ದರು. ಶ್ರೀಗಳ ಪರವಾಗಿ ಕಾನೂನು ಘಟಕದ ಅಧ್ಯಕ್ಷರಾದ ಬೆಳಗಾವಿ ದಿನೇಶ ಪಾಟೀಲ್ ವಾದ ಮಂಡಿಸಿದರು. ಈಗಾಗಲೇ ಎರಡು ವರ್ಷಗಳ ಕಾಲ ರಾಜ್ಯಾದ್ಯಂತ ಬಹುಪಾಲು ಜಿಲ್ಲೆಗಳಲ್ಲಿ ಸರ್ವೇ ಮಾಡಿ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೀರಿ. ಮತ್ತೊಮ್ಮೆ ದಾಖಲಾತಿಗಳನ್ನು ಕೇಳಿ ಸಮಯವನ್ನು ವಿಳಂಬ ಮಾಡುವುದು ಸರಿಯಲ್ಲ ಎಂದವರು ಗಮನಸೆಳೆದರು.

ಈಗಾಗಲೇ ಸಮೀಕ್ಷೆಯ ಮೂಲಕ ಯಾವ ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ ಎಂಬುದನ್ನು ಬಹಿರಂಗ ಪ್ರಕಟಿಸಿರಿ ಎಂದು ಆಗ್ರಹಿಸಿದರು. ಆಯೋಗದ ಸದಸ್ಯರೆಲ್ಲರೂ ದಿನೇಶ ಪಾಟೀಲ್ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.

ಬಹಿರಂಗ ವಿಚಾರಣೆಯಲ್ಲಿ ಶ್ರೀಗಳೊಂದಿಗೆ ಗದಗ ಜಿಲ್ಲಾ ಯುವ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಐಟಿಬಿಟಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಣಗೌಡ ಪಾಟೀಲ್ , ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಪುಟ್ಟರಾಜು , ಸುರೇಶ್ ಪಲ್ಲೆದ ಮೊದಲಾದವರು ಉಪಸ್ಥಿತರಿದ್ದರು.

Related posts