ಸಿದ್ದು ಸರ್ಕಾರಕ್ಕೂ ಪರ್ಸೆಂಟೇಜ್ ಕಳಂಕ; ಅಜ್ಜಯ್ಯ ಮುಂದೆ ಪ್ರಮಾಣ ಮಾಡ್ತಾರಾ ಡಿಕೆಶಿ?

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಪರ್ಸೆಂಟೇಜ್ ಆರೋಪದ ಹೊಡೆತ ತಟ್ಟಿದೆ. ಹಿಂದಿನ ಬೊಮ್ಮಾಯಿ ಸರ್ಕಾರದ ವಿರುದ್ಧ ಪರ್ಸೆಂಟೇಜ್ ಆರೋಪ ಮಾಡುತ್ತಲೇ ಅಧಿಕಾರ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಇದೀಗ ಅದೇ ಆರೋಪದ ಹೊಡೆತ ಮೂಲಕ ಕಟ್ಟಿಹಾಕಲು ಪ್ರಯತ್ನಿಸುತ್ತಿದೆ.

ಗುತ್ತಿಗೆದಾರರ ಹಣ ಬಿಡುಗಡೆಗೆ ಕಮೀಷನ್ ಕೇಳಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದು ಈ ಬೆಳವಣಿಗೆಯನ್ನು ಮುಂದಿಟ್ಟು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಕಮೀಷನ್ ಕೇಳಿಲ್ಲ ಎಂದಾದರೆ ತಾವು ಪೂಜಿಸುವ ಅಜ್ಜಯ್ಯ ಮೇಲೆ ಆನೆ-ಪ್ರಮಾಣ ಮಾಡುವಂತೆ ಗುತ್ತಿಗೆದಾದರೂ ಸವಾಲು ಹಾಕಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ತಾವು ಹಾಗೂ ತಮ್ಮ ಸರ್ಕಾರ ಪ್ರಮಾಣಿಕ ಎಂದು ಡಿ.ಕೆ.ಶಿವಕುಮಾರ್ ಭಾವಿಸುವುದಾದರೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಒತ್ತಾಯದಂತೆ ಅಜ್ಜಯ್ಯನವರ ಮಠದಲ್ಲಿ ಪ್ರಮಾಣ ಮಾಡಲಿ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಈ ಆರೋಪಗಳನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘದಿಂದಲೂ ಮಾಡಲಾಗಿದೆ. ಹೀಗಾಗಿ, ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡುವ ಮೂಲಕ ನಿರಪರಾಧಿ ಎಂದು ಸಾಬೀತುಪಡಿಸಲಿ ಎಂದು ಡಿಕೆಶಿಗೆ ಸವಾಲು ಹಾಕಿದರು.

ಹಳೆ ಕಾಮಗಾರಿಗಳ ಬಿಲ್‌ ಪಾವತಿಗೆ ಮೊದಲು ಶೇ 7ರಷ್ಟು ಕಮಿಷನ್ ನಿಗದಿಪಡಿಸಿದ್ದರು. ನಂತರ ಮಧ್ಯವರ್ತಿಗಳು ಶೇ 10ರಷ್ಟು ಕೊಡಬೇಕು ಎಂದರು. ಬಳಿಕ ಶೇ 15ರಷ್ಟು ಕಮಿಷನ್ ನೀಡಿದರೆ ಮಾತ್ರ ಬಿಲ್ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಗುತ್ತಿಗೆದಾರರು ಆರೋಪ ಮಾಡಿದ್ದಾರೆ ಎಂದ ಸಿ.ಟಿ.ರವಿ, ಈ ಆರೋಪಗಳು ಸುಳ್ಳು ಎನ್ನುವುದಾದರೆ ಡಿಕೆಶಿ ಅವರು ಅಜ್ಜಯ್ಯನ ಮಠಕ್ಕೆ ತೆರಳಿ ಪ್ರಮಾಣ ಮಾಡುವ ಮೂಲಕ ಸತ್ಯವನ್ನು ಬಹಿರಂಗಪಡಿಸಲಿ. ಪ್ರಮಾಣ ಮಾಡುವಾಗ ನನ್ನ ಜೀವನದಲ್ಲೇ ಇನ್ನಾವ ಲಂಚವನ್ನೂ ಸ್ವೀಕರಿಸಿಲ್ಲ ಎಂದು ಹೇಳಿದರೆ ಬೇರೆ ಯಾವ ಸಾಕ್ಷ್ಯವೂ ಬೇಕಾಗುವುದಿಲ್ಲ ಎಂದು ಕುಟುಕಿದ್ದಾರೆ.

Related posts