ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ರಾಜರಾಜೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ. ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ.
ಪ್ರತೀ ವರ್ಷದಂತೆ, ಮಾರ್ಚ್ 14ರ ತಡ ರಾತ್ರಿ ದಕ್ಷಿಣಕನ್ನಡದ ಪೊಳಲಿ ಕ್ಷೇತ್ರದಲ್ಲಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗಿದೆ. ಇದೀಗ ಜಾತ್ರೆಯ ಅಂತಿಮ ಘಟ್ಟದಲ್ಲಿ ‘ಚೆಂಡು ಉತ್ಸವ’ ನೆರವೇರುತ್ತಿದ್ದು ಇದು ‘ಭಕ್ತಿ-ಶಕ್ತಿ ಜೊತೆಗಿನ ಕಾದಾಟದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ.
ಬೇರೆ ದೇಗುಲಗಳ ಜಾತ್ರೆಗಿಂತ ‘ಪೊಳಲಿ’ ವಿಭಿನ್ನ..!
ಜಗತ್ತಿನಲ್ಲೇ ನಿತ್ಯ ಪೂಜಿತ ಅತೀ ದೊಡ್ಡ ಮೃಣ್ಮಯಿ ಮೂರ್ತಿಯ ಏಕೈಕ ದೇಗುಲ ಪೊಳಲಿಯ ಶ್ರೀ ರಾಜರಾಜೇಶ್ವರಿ ಕ್ಷೇತ್ರ. ಅರಸರಿಗೆಲ್ಲಾ ಈ ದೇವಿಯೇ ರಾಜೆ ಎಂಬುದು ಪುರಾಣದಿಂದಲೇ ತಿಳಿಯುತ್ತಿದೆ. ಸುರಥ ಮಹಾರಾಜ ತನ್ನ ಕಿರೀಟವನ್ನೇ ದೇವಿಯ ಮೂರ್ತಿಗೆ ಇಟ್ಟು ದೇವಿಯನ್ನೇ ರಾಜಳೆಂದು ಘೋಷಿಸಿದ ಈ ನೆಲದಲ್ಲಿ, ರಾಜರಾಜೇಶ್ವರಿಗೇ ಮೊದಲ ಗೌರವ. ಈ ದೇಗುಲದ ಸಾವಿರ ಸೀಮೆಯಲ್ಲಿ ಯಾರೊಬ್ಬರೂ ಯಾರನ್ನೂ ಹೊಡೆಯಲ್ಲ ಬಡಿಯಲ್ಲ. ಹೆತ್ತವರು ಹೊರತಾಗಿ ಯಾರೂ ಯಾರನ್ನೂ ದಂಡಿಸಲ್ಲ. ಏನಾದರೂ ಕ್ರೋಧ, ಸಿಟ್ಟು, ದುಗುಡ ಇದ್ದಲ್ಲಿ ದೇವಿಯ ಮುಂದೆಯೇ ಹೇಳಿಕೊಳ್ಳುವ ಪರಿಪಾಠ ಇಂದಿಗೂ ನಡೆದುಕೊಂಡು ಬಂದಿರುವುದು ಈ ಊರಿನದ್ದೇ ಆದ ವಿಶೇಷ. ಎಷ್ಟೇ ಪ್ರತಿಷ್ಠಿತರು, ಮಂತ್ರಿಗಳು ಬಂದರೂ ಈ ಊರಲ್ಲಿ ಯಾರ ಕೊರಳಿಗೂ ಹೂ ಹಾರ ಹಾಕಿ ಗೌರವಿಸುವುದಿಲ್ಲ. ಈ ಊರಲ್ಲಿ ಹೂ ಹಾರ ಹಾಕುವುದಿದ್ದರೆ ಅದು ದೇವರಿಗೆ ಮಾತ್ರ. ದೇವರ ಸನ್ನಿಧಿ ಬಳಿ ವಿವಾಹ ಸಮಾರಂಭದಲ್ಲಿ ವಧೂ-ವರರನ್ನು ಹೊರತು ಪಡಿಸಿ ಬೇರೆ ಯಾವ ಸಂದರ್ಭದಲ್ಲೂ ಹೂಹಾರ ಹಾಕಿ ಯಾರನ್ನೂ ಗೌರವಿಸಿದ ಇತಿಹಾಸವೇ ಇಲ್ಲ ಅಂತಿದ್ದಾರೆ ಊರ ಹಿರಿಯರು.
ಈ ಊರಲ್ಲಿ ಅನನ್ಯ ಎಂಬಂತೆ ಒಂದು ತಿಂಗಳ ಕಾಲದ ಸುದೀರ್ಘ ಜಾತ್ರೆ ನಡೆಯುತ್ತದೆ. ಎಲ್ಲವೂ ಕುತೂಹಲ ಎಂಬಂತೆ ಇಂತಿಷ್ಟೇ ದಿನ ಜಾತ್ರೆ ನಡೆಯುತ್ತದೆ ಎಂಬುದು ದೇಗುಲದ ಆಡಳಿತ ಮಂಡಳಿಯವರಿಗಾಗಲೀ ಅರ್ಚಕರಿಗಾಗಲಿ ತಿಳಿಯಲ್ಲ. ಧ್ವಜಾರೋಹಣ ನಂತರ ಮುಂಜಾನೆ, ಬೆಳ್ಳಂಬೆಳಿಗ್ಗೆ ಎಷ್ಟು ದಿನಗಳ ಜಾತ್ರೆ ನಡೆಯುತ್ತದೆ ಎಂಬುದು ಘೋಷಣೆಯಾಗುತ್ತದೆ.
View this post on Instagram
ಈ ಘೋಷಣೆಯನ್ನು ಕೇಳಲು ಇಡೀ ನಾಡು ಕಾತುರದಿಂದ ಕಾಯುತ್ತದೆ. ಈ ಬಾರಿಯೂ ಅದೇ ರೀತಿಯಲ್ಲಿ ಕೈಂಕರ್ಯ ನೆರವೇರಿದೆ.ಈ ವರ್ಷವೂ ಪೂರ್ತಿ ಒಂದು ತಿಂಗಳ (30 ದಿನಗಳ) ಪೊಳಲಿ ಜಾತ್ರಾ ವೈಭವ.
ಹೀಗಿದೆ ಅನನ್ಯ ಜಾತ್ರಾ ವೈಭವ:
-
ಒಂದು ತಿಂಗಳ ಕಾಲದ ಜಾತ್ರೆ ಸಂದರ್ಭದಲ್ಲಿ ಪ್ರತೀ ಐದು ದಿನಗಳಿಗೊಮ್ಮೆ ‘ದಂಡಮಾಲೋತ್ಸವ’..
-
ಏಪ್ರಿಲ್ 6ರಂದು ಮೊದಲ ದಿನದ ಚೆಂಡಾಟ ಮಹೋತ್ಸವ ಗಮನಸೆಳೆಯಿತು..
-
ಐದು ದಿನಗಳ ಈ ಚೆಂಡಾಟ ಮಹೋತ್ಸವವು ಆಸ್ತಿಕ ಸಮೂಹದ ‘ಭಕ್ತಿ-ಶಕ್ತಿಯ ಕಾಳಗ’ಕ್ಕೆ ಸಾಕ್ಷಿಯಾಗುತ್ತಿದೆ..
-
ಏಪ್ರಿಲ್ 10ರಂದು ‘ಕಡೇ ಚೆಂಡು’. ಮರುದಿನ ಅಂದರೆ ಏಪ್ರಿಲ್ 11ರಂದು ‘ಮಹಾರಥೋತ್ಸವ’ ಕೈಂಕರ್ಯ ಮೂಲಕ ಅದ್ದೂರಿ ವೈಭವದ ಸನ್ನಿವೇಶಕ್ಕೆ ಈ ಜಾತ್ರೆ ಸಾಕ್ಷಿಯಾಗಲಿದೆ..
-
ಏಪ್ರಿಲ್ 12ರಂದು ಆರಾಟ ಮಹೋತ್ಸವ ಸಂದರ್ಭದಲ್ಲಿ ಧ್ವಜಸ್ಥಂಭದಿಂದ ‘ಗರುಡಧ್ವಜ’ವನ್ನು ಇಳಿಸಿದ ನಂತರ ತಿಂಗಳ ಕಾಲದ ರಾಜರಾಜೇಶ್ವರಿ ಜಾತ್ರೆಗೆ ತೆರೆ ಬೀಳುವುದು..
-
ಆದರೂ ಜಾತ್ರೆಯ ಸಡಗರ ಮರುದಿನವೂ ಇರುತ್ತದೆ. ಆರಾಟ ಮಹೋತ್ಸವದ ಮರುದಿನ ದೇವಾಲಯದ ದೈವ ದೇವರಿಗೆ ಸಲ್ಲುವ ನೇಮೋತ್ಸವ ಕೂಡಾ ಪೊಳಲಿ ಕ್ಷೇತ್ರದ್ಧೇ ಆದ ವೈಶಿಷ್ಟ್ಯ.
ಏನಿದು ಪೊಳಲಿ ಚೆಂಡು?
ದುರ್ಗಾ ದೇವತೆಗಳ ನಾಡು ಎಂದೇ ಜನಜನಿತವಾಗಿರುವ ರಾಜ್ಯ ಕರಾವಳಿಯಲ್ಲಿ ಕಟೀಲು ದುರ್ಗಾ ಪರಮೇಶ್ವರಿ, ಸುಂಕದಕಟ್ಟೆ ಅನ್ನಪೂರ್ಣೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹೀಗೆ ನವದುರ್ಗೆಯರ ಪೈಕಿ ಹಿರಿಯವಳೇ ಪೊಳಲಿ ರಾಜರಾಜೇಶ್ವರಿ.
ಪುರಾಣ ಕಥೆಗಳಲ್ಲಿ ಉಲ್ಲೇಖವಿರುವಂತೆ ನಾಡಿಗೆ ಕಂಟಕವಾಗಿದ್ದ ರಾಕ್ಷಸರನ್ನು ಈ ದೇವಿ ಯುದ್ಧದಲ್ಲಿ ಸೋಲಿಸಿ, ಅವರ ರುಂಡವನ್ನು ಚೆಂಡಾಡಿ ದಿಗ್ವಿಜಯದ ನಗೆ ಬೀರಿದ್ದಾಳೆ ಎಂಬುದು ಪುರಾಣದಲ್ಲಿನ ನಂಬಿಕೆ. ಯುದ್ಧ ಗೆದ್ದ ಸಂದರ್ಭದಲ್ಲಿ ರಾಕ್ಷಸರ ರುಂಡ ಚೆಂಡಾಟದ ಮೂಲಕ ಶ್ರೀ ದೇವಿ ಅಪೂರ್ವ ಖುಷಿ ಪಟ್ಟಲೆಂಬುದೂ ಪ್ರತೀತಿ.
#WATCH | Dakshina Kannada, Karnataka: Hundreds of devotees took part in the annual festival of Shri Rajarajeshwari temple in Polali, and played ‘Chendu’ (football). Polali Chendu festival is a festive event where football is played to represent the fight for good over evil.… pic.twitter.com/iaANNgAjOo
— ANI (@ANI) April 7, 2023
ಪುರಾಣದ ಪ್ರಸಂಗದಂತೆ ದೇವಿಯನ್ನು ಸಂತುಷ್ಟಗೊಳಿಸಲು ಭಕ್ತ ಸಮೂಹದಿಂದ ಈಗಲೂ ಜಾತ್ರೆಯ ಅಂತಿಮ ದಿನಗಳಲ್ಲಿ ಚೆಂಡಾಟ ಮೂಲಕ ಭಕ್ತಿ-ಶಕ್ತಿಯ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಚರ್ಮದ ಹೊದಿಕೆಯ ವಿಶೇಷ ಚೆಂಡು ಭಾರೀ ತೂಕವನ್ನೂ ಹೊಂದಿದೆ. ಆದರೂ ಭಕ್ತರಿಗೆ ಚೆಂಡಾಟ ಕಠಿಣ ಎಂದೆನಿಸದು. ಭಕ್ತರು ಬರಿಗಾಲಲ್ಲೇ ಈ ಚೆಂಡಾಟ ಆಡುವ ಸನ್ನಿವೇಶ ರೋಮಾಂಚಕ. ಆರಂಭದ ದಿನಗಳಲ್ಲಿ ಮಕ್ಕಳೇ ಚೆಂಡಾಟ ಆಡಿದರೆ, ಅಂತಿಮವದಿನಗಳಲ್ಲಿ ಯುವಕರು-ಹಿರಿಯರೂ ಭಾಗವಹಿಸಿ ರೋಮಾಂಚನದ ಅಖಾಡ ಸೃಷ್ಟಿಸುತ್ತಾರೆ.
ಟಿಪ್ಪು ಆಡಳಿತ ಸಂದರ್ಭದ ಸನ್ನಿವೇಶ, ಅಬ್ಬಕ್ಕ ರಾಣಿಯ ಕಾಲಾವಧಿಯ ಕುರುಹುಗಳು ಈ ‘ಚೆಂಡು ಉತ್ಸವ’ದ ಮಹಿಮೆಯ ಒಂದು ಭಾಗವಾಗಿ ಈಗಲೂ ಸ್ಮರಣೀಯವಾಗಿದೆ. ಜಾತಿ-ಧರ್ಮ-ಸೀಮೆ ಎಂಬ ಭೇದವಿಲ್ಲದೆ ಮನುಕುಲ ಈ ಉತ್ಸವದಲ್ಲಿ ಭಾಗವಹಿಸುತ್ತದೆ.