ಮಾಲೆಗಾಂವ್ ಸ್ಫೋಟದಲ್ಲಿ ಮೋಹನ್ ಭಾಗವತ್ ವಿರುದ್ಧ ಸಂಚು ನಡೆದಿತ್ತು; ಪ್ರಜ್ಞಾ ಠಾಕೂರ್ ಬಾಂಬ್

ನವದೆಹಲಿ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ತನಿಖೆಯ ಸಮಯದಲ್ಲಿ ಸುಳ್ಳು ಮಾಹಿತಿಯನ್ನು ಹರಡಲು ನಿರಾಕರಿಸಿದ್ದಕ್ಕಾಗಿ ತಮ್ಮನ್ನು ಚಿತ್ರಹಿಂಸೆಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಭೋಪಾಲ್ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಭೋಪಾಲ್‌ನ ಮಾಜಿ ಸಂಸದೆ, “ಸುಳ್ಳು ಮಾಹಿತಿಯನ್ನು ಹರಡಲು ನನಗೆ ಕೇಳಲಾಯಿತು, ಆದರೆ ನಾನು ಹಾಗೆ ಮಾಡಲಿಲ್ಲ. ಅದಕ್ಕಾಗಿಯೇ ನನಗೆ ಇಷ್ಟೊಂದು ಚಿತ್ರಹಿಂಸೆ ನೀಡಲಾಯಿತು” ಎಂದು ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಬಿಜೆಪಿ ನಾಯಕರಾದ ರಾಮ್ ಮಾಧವ್ ಮತ್ತು ಇಂದ್ರೇಶ್ ಕುಮಾರ್ ಸೇರಿದಂತೆ ಪ್ರಮುಖ ವ್ಯಕ್ತಿಗಳನ್ನು ದೋಷಾರೋಪಣೆ ಮಾಡಲು ತನಿಖಾಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಠಾಕೂರ್ ಆರೋಪಿಸಿದರು. ‘ಈ ನಾಯಕರ ಹೆಸರುಗಳನ್ನು ಹೇಳಿದರೆ, ನಿಮ್ಮನ್ನು ಹಿಂಸಿಸುವುದನ್ನು ನಿಲ್ಲಿಸುತ್ತೇವೆ’ ಎಂದು ಹೇಳಿದ್ದರು. ಅವರ ಏಕೈಕ ಉದ್ದೇಶ ನನ್ನನ್ನು ಸುಳ್ಳು ಹೇಳುವಂತೆ ಮಾಡುವುದಾಗಿತ್ತು’ ಎಂದು ಅವರು ಹೇಳಿದರು.

ಕಸ್ಟಡಿಯಲ್ಲಿದ್ದಾಗ 24 ದಿನಗಳ ನಿರಂತರ ಚಿತ್ರಹಿಂಸೆಗೆ ಒಳಗಾಗಿದ್ದಾಗಿ ಹೇಳಿಕೊಂಡರು. ಪದಗಳಿಗೆ ಮಿತಿ ಇರುವುದರಿಂದ ದೌರ್ಜನ್ಯಗಳನ್ನು ವಿವರಿಸಲು ಸಹ ಸಾಧ್ಯವಿಲ್ಲ” ಎಂದ ಅವರು, ತನ್ನ ಮೇಲೆ ದೌರ್ಜನ್ಯ ಎಸಗಿದ್ದ ಅಧಿಕಾರಿಗಳ ಹೆಸರನ್ನು ಲಿಖಿತ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ತಿಳಿಸಿದರು.

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಉಲ್ಲೇಖಿಸಿ ಹೇಳಿಕೆ ನೀಡಿದ ಸಾಧ್ವಿ ಪ್ರಜ್ಞಾ ಸಿಂಗ್, ಸಾರ್ವಜನಿಕ ಹುದ್ದೆಯನ್ನು ಹೊಂದಲು ಅನರ್ಹ ಎಂದರು. ಪರಮ್‌ವೀರ್ ಸಿಂಗ್ ಒಬ್ಬ ಕೆಟ್ಟ, ಅತ್ಯಂತ ಕೆಟ್ಟ ರೀತಿಯ ವ್ಯಕ್ತಿ. ಅವರು ಅಧಿಕಾರಿಯಾಗಲು ಅರ್ಹರಲ್ಲಎಂದು ಅವರು ನೇರ ಮತ್ತು ಕಟುವಾದ ಭಾಷೆಯಲ್ಲಿ ಟೀಕಿಸಿದರು.

ವಿಶೇಷ ಎನ್‌ಐಎ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದ ನಂತರ ಸಾಧ್ವಿ ಪ್ರಜ್ಞಾ ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ. 2008 ರಲ್ಲಿ ನಡೆದ ಮಾಲೆಗಾಂವ್ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿ, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣವು ‘ಕೇಸರಿ ಭಯೋತ್ಪಾದನೆ’ ಎಂದು ಬಿಂಬಿತವಾಗಿತ್ತು.

 

 

 

 

Related posts