ಪ್ರಾಸಿಕ್ಯೂಷನ್ ಅನುಮತಿ ವಿಚಾರ; ಇದೀಗ ಹೆಚ್ಡಿಕೆ, ಜೊಲ್ಲೆ, ನಿರಾಣಿ ವಿರುದ್ದದ ಪ್ರಕರಣಗಳು ಮುಂಚೂಣಿಗೆ

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಹಾಗೂ ಹಿಂದಿನ ಬಿಜೆಪಿ ಸರ್ಕಾರದದಲ್ಲಿ ಸಚಿವರಾದ ಅಗಿದ್ದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಅವರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ನೀಡಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವ ಪೊಲೀಸ್ ಆಫೀಸರ್ ಕೂಡ ಅನುಮತಿ ಕೇಳದಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮದ ಹಿಂದಿನ ಅಜೆಂಡಾ ಏನು ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.

ಮುಡಾ ನಿವೇಶನ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಬೆನ್ನಲ್ಲೇ ಇದೀಗ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ವಿರುದ್ದದ ಪ್ರಕರಣಗಳು ಮುನ್ನಲೆಗೆ ಬಂದಿವೆ. ಈ ನಾಯಕರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ನೀಡಿಲ್ಲ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ ಹಾಗೂ ಕಂದಾಯ ಮಂತ್ರಿ ಕೃಷ್ಣಬೈರೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈ ನಾಯಕರು ರಾಜ್ಯಪಾಲರ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಯಬೇಕು. ಭಾರತ ಸರ್ಕಾರ ಸೆಪ್ಟೆಂಬರ್ 3, 2021 ರಲ್ಲಿ 17 ಎ ಸೆಕ್ಷನ್ ಅನ್ನು ಹೇಗೆ ಪರಿಗಣಿಸಬೇಕೆಂದು ನಿಯಮಾವಳಿ ರೂಪಿಸಿದ್ದಾರೆ. ಅಂದರೆ ಪೊಲೀಸ್ ಅಧಿಕಾರಿ ಒಂದು ಹುದ್ದೆಯಲ್ಲಿ ಇರುವ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಲು ಈ ಸೆಕ್ಷನ್ ಅಡಿ ಅನುಮತಿ ಪಡೆಯಬೇಕು. ಪ್ರಸ್ತುತ ಈ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿ ಅನುಮತಿ ಪಡೆದಿದ್ದಾರೆ? ಎಂದು ಪ್ರಶ್ನಿಸಿದರು.

17ಎ ಸೆಕ್ಷನ್ ಇರುವುದೇ ಪೊಲೀಸ್ ಅಧಿಕಾರಿಗಳು ಅನುಮತಿ ಪಡೆಯುವ ಸಲುವಾಗಿ. ಮಾನ್ಯ ರಾಜ್ಯಪಾಲರೇ ಯಾವ ಪೊಲೀಸ್ ಅಧಿಕಾರಿಯು ತನಿಖೆಗೆ ಅನುಮತಿ ನೀಡಿ ಎಂದು ನಿಮಗೆ ವರದಿ ನೀಡಿದ್ದಾರೆ? ಯಾವ ಪೊಲೀಸ್ ಅಧಿಕಾರಿ ನಿಮಗೆ ಅನುಮತಿ ಕೇಳಿದ್ದಾರೆ ಆ ದಾಖಲೆ ಕೊಡಿ ಎಂದ ಕೃಷ್ಣ ಬೈರೇಗೌಡ, ಪೊಲೀಸ್ ಅಧಿಕಾರಿಗಳು ತನಿಖೆಗೆ ಅನುಮತಿ ನೀಡಿ ಎಂದು ಈ ಹಿಂದೆ ಕೇಳಿರುವ ನಾಲ್ಕು ಪ್ರಕರಣಗಳು ನಿಮ್ಮ ಮುಂದೆ ಬಾಕಿ ಇವೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ಅವರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ನೀಡಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವ ಪೊಲೀಸ್ ಆಫೀಸರ್ ಕೂಡ ಅನುಮತಿ ಕೇಳದಿದ್ದರೂ ಏಕೆ ನೀಡಿದ್ದೀರಾ ಎಂದು ಪ್ರಶ್ನಿಸಿದರು.

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಪ್ರಕರಣದಲ್ಲಿ ತಪ್ಪು ಮಾಡಿರುವವರ ವಿರುದ್ಧ ದಾಖಲೆ ಇರಬೇಕು. ಯಾರ ಮೇಲೆ ಆಪಾದನೆ ಬಂದಿದೆ ಅವರು ಯಾವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಪೊಲೀಸರು ರಾಜ್ಯಪಾಲರಿಗೆ ನೀಡಬೇಕು. ಆಗ ಮಾತ್ರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಸಾಧ್ಯ. ಭಾರತ ಸರ್ಕಾರವು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುಂಚೆ ಯಾವ, ಯಾವ ದಾಖಲೆಗಳನ್ನು ಒದಗಿಸಬೇಕು ಎಂಬುದಕ್ಕೆ ಪಟ್ಟಿಯನ್ನು ನೀಡಿದ್ದಾರೆ. ಇವುಗಳಲ್ಲಿ ಒಂದೇ ಒಂದು ದಾಖಲೆಯನ್ನು ರಾಜ್ಯಪಾಲರು ತೋರಿಸಲಿ ಎಂದರು.

ತನಿಖೆಗೆ ಅನುಮತಿ ಕೊಡಿ ಎಂದು ಮನವಿ ಮಾಡುವ ಅಧಿಕಾರ ಇರುವುದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರಿಗೆ ಮಾತ್ರ. ಪ್ರಸ್ತುತ ರಾಜ್ಯಪಾಲರು ಅನುಮತಿ ನೀಡಿರುವುದು ಸಂಪೂರ್ಣ ಕಾನೂನುಬಾಹಿರ. ಇತ್ತೀಚಿಗೆ ಜಸ್ಟಿಸ್ ನಾಗರತ್ನ ಅವರು ರಾಜ್ಯಪಾಲರು ಕೇವಲ ಒಂದು ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಎಂದು ಅವರು ಪ್ರತಿಪಾದಿಸಿದರು.

Related posts