PSI ಹಗರಣ: ಬಿಜೆಪಿ ಸರ್ಕಾರಕ್ಕೆ ಫೋನ್ ಸಂಭಾಷಣೆಯ ಕುತ್ತು

ಬೆಂಗಳೂರು: ಪಿಎಸ್‌ಐ ನೇಮಕಾತಿ ಕರ್ಮಕಾಂಟ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ಸಿಡಿಸಿರುವ ಫೋನ್ ಬಾಂಬ್ ಬಿಜೆಪಿ ಪಾಲಿಗೆ ಸವಾಲಾಗಿ ಪರಿಗಣಿಸಿದೆ. ಫೋನ್ ಸಂಭಾಷಣೆಯ ಆಡಿಯೋವನ್ನು ಮುಂದಿಟ್ಟು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಅರಗ ಜ್ಞಾನೇಂದ್ರ ಅವರದ್ದೆನ್ನಲಾದ ಸಂಭಾಷಣೆಯ ಆಡಿಯೋದಲ್ಲಿ ಪ್ರಸ್ಯಾಪವಾಗಿರುವ ಶಾಸಕರು ಯಾರು ಎಂದು ಪ್ರಶ್ನಿಸಿದೆ. ಪ್ರಭಾವಿಗಗಳನ್ನು ಪಾರು ಮಾಡುವ ಉದ್ದೇಶದಿಂದಲೇ ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಸರ್ಕಾರದ ಕಾರ್ಯವೈಖರ ಬಗ್ಗೆ ಕಾಂಗ್ರೆಸ್ ದೂರಿದೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪಿಎಸ್‌ಐ ನೇಮಕಾತಿ ಅಕ್ರಮ ಕುರಿತಾಗಿ ಗೃಹಸಚಿವರು ಹಾಗೂ ಅಭ್ಯರ್ಥಿ ನಡುವಿನ ಫೋನ್ ಸಂಭಾಷಣೆಯಿಂದ ಹಲವು ಅನುಮಾನಗಳು, ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಅಭ್ಯರ್ಥಿ ನೀಡಿದ ಸಾಕ್ಷಿಗಳು ಏನು? ಅವುಗಳನ್ನು ಮುಚ್ಚಿಟ್ಟಿರುವುದೇಕೆ? ಡಿಜಿ, ಐಜಿಪಿ ಹಾಗೂ ಕಲ್ಬುರ್ಗಿ ಕಮಿಷನರ್ ಬಗ್ಗೆ ದಾಖಲೆ ನೀಡಿದ್ದರೂ ಆವರ ತನಿಖೆಯಾಗದಿರುವುದೇಕೆ? ಎಂದು ಪ್ರಶ್ನಿಸಿದೆ.

ಗೃಹಸಚಿವರ ಫೋನ್ ಸಂಭಾಷಣೆಯಲ್ಲಿ 3 ಶಾಸಕರ ಬಗ್ಗೆ ಪ್ರಸ್ತಾಪವಾಗಿದೆ. PSI ಅಕ್ರಮದಲ್ಲಿ ಬಾಗಿಯಾದ ಆ 3 ಶಾಸಕರು ಯಾರು? ಅವರ ತನಿಖೆ ಆಗದಿರುವುದೇಕೆ? ಅವರ ಹೆಸರುಗಳನ್ನು ಮುಚ್ಚಿಡುತ್ತಿರುವುದೇಕೆ? PSI ಅಕ್ರಮದಲ್ಲಿ ಹೆಸರು ಕೇಳಿಬಂದ ಶಾಸಕ ಬಸವರಾಜ್ ದಡೇಸಗೂರ ಅವರನ್ನು ತನಿಖೆ ಒಳಪಡಿಸದಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

PSI ಹಗರಣಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ಬಂಧಿತರದವರಿಗೆ ಜಾಮೀನು ಸಿಕ್ಕಿದ್ದು ಸರ್ಕಾರದ ಲೋಪದಿಂದಾಗಿ ಎಂದು ಒಪ್ಪಿದ್ದಾರೆ, ಆರೋಪಿಗಳನ್ನು ರಕ್ಷಿಸಲು ಸರ್ಕಾರ ಉದ್ದೇಶಪೂರ್ವಕವಾಗಿ ಲೋಪವೆಸಗಿದೆಯೇ ಎಂದು ಸಚಿವ ಅರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿರಿವ ಕಾಂಗ್ರೆಸ್, ಎಡಿಜಿಪಿ ಅಮೃತ್ ಪೌಲ್ ಅವರ ಮಟ್ಟಿಗೆ ಮಾತ್ರ ತನಿಖೆಯನ್ನು ಸೀಮಿತಗೊಳಿಸಿದ್ದೇಕೆ? ಎಂದು ಪ್ರಶ್ನಿಸಿದೆ.

ಅಮೃತ್ ಪೌಲ್ ಅವರ ಹೇಳಿಕೆಯನ್ನು ಸೆಕ್ಷನ್ 164A ಅಡಿಯಲ್ಲಿ ದಾಖಲಿಸಿಕೊಳ್ಳಲು ಹಿಂಜರಿಯುತ್ತಿರುವುದು ಏಕೆ ಎಂಬ ಪ್ರಶ್ನೆ ಮುಂದಿಟ್ಟಿರುವ ಕಾಂಗ್ರೆಸ್, ದೊಡ್ಡ ಮೀನುಗಳ ಹೆಸರುಗಳು ಬಹಿರಂಗವಾಗಬಹುದು ಎಂಬ ಭಯವೇ? ಎಂದು ಕೇಳಿದೆ. ಯತ್ನಾಳರ ಹೇಳಿಕೆಯಂತೆ ಆ “ಮಾಜಿ ಸಿಎಂ ಪುತ್ರ”ನ ತನಿಖೆ ಮಾಡದಿರುವುದೇಕೆ? PSI ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಹಿಂಜರಿಕೆ ಏಕೆ? ಎಂದು ಸರ್ಕಾರವನ್ನು ಕೇಳಿದೆ.

ಪ್ರಾಮಾಣಿಕವಾಗಿ PSI ಹಗರಣದ ತನಿಖೆಯಾದರೆ ಸಿಎಂ ಸಹಿತ ಬಿಜೆಪಿ ಸರ್ಕಾರದ ಇಡೀ ಸಂಪುಟವೇ ಜೈಲಿನಲ್ಲಿರುತ್ತದೆ! ಬಿಜೆಪಿಯ ಹಿಂದಿನ ಆಡಳಿತಾವಧಿಯಲ್ಲಿ ಅರ್ಧ ಸರ್ಕಾರ ಜೈಲಿಗೆ ಹೋಗಿತ್ತು, ಈಗ ಇಡೀ ಸರ್ಕಾರ ಕಂಬಿ ಹಿಂದೆ ಹೋಗಬೇಕಾದ ಸನ್ನಿವೇಶ ಬರುತ್ತಿತ್ತು. ಆ ಕಾರಣದಿಂದಾಗಿಯೇ PSI ಹಗರಣದ ತನಿಖೆಯನ್ನು ಸರ್ಕಾರ ಅದುಮಿಹಾಕಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಅಮೃತ್ ಪೌಲ್ ಅವರು ಸೆಕ್ಷನ್ 164ಎ ನಲ್ಲಿ ಹೇಳಿಕೆ ನೀಡಲು ಸಿದ್ಧರಿದ್ದರೂ ಹೇಳಿಕೆ ದಾಖಲಿಸಿಕೊಳ್ಳಲು ಯಾಕೆ ಹೆದರುತ್ತಿದ್ದೀರಿ? ಕೇವಲ ವೇದಿಕೆಯ ಮೇಲೆ ಧಮ್ಮು, ತಾಕತ್ತಿನ ಬಗ್ಗೆ ಮಾತನಾಡುವುದಲ್ಲ, ಪೌಲ್ ಅವರ ಹೇಳಿಕೆ ದಾಖಲಿಸಿಕೊಂಡು, ನೇಮಕಾತಿ ಪರೀಕ್ಷೆ ಬರೆದ ಅಬ್ಯರ್ಥಿಗಳಿಗೆ ನ್ಯಾಯ ಒದಗಿಸಿ ಅದನ್ನು ಪ್ರದರ್ಶಿಸಿ ಎಂದು ಸರ್ಕಾರವನ್ನು ಕಾಂಗ್ರೆಸ್ ಕೆಣಕಿದೆ.

ನಿಮ್ಮದೇ ಶಾಸಕರಾದ ಯತ್ನಾಳ್ ಅವರು ‘ಈ ಅಕ್ರಮದಲ್ಲಿ  ಬಿಎಸ್‌ವೈ ಪುತ್ರ ವಿಜಯೇಂದ್ರ ಇದ್ದಾರೆ,ಈ ಡೀಲ್ ವಿಧಾನಸೌಧದಲ್ಲೇ ನಡೆದಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರ ವಿಚಾರಣೆ ನಡೆಸಿದಿರಾ? ಯಡಿಯೂರಪ್ಪ ಅವರು ಹಾಗೂ ವಿಜೇಂದ್ರ ಅವರ ವಿಚಾರಣೆ ಮಾಡಿದಿರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

 

Related posts