ದೊಡ್ಡಬಳ್ಳಾಪುರ: ನಾವು ಎಷ್ಟು ದಿನ, ಎಷ್ಟು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯವಲ್ಲ ಅಧಿಕಾರ ಇದ್ದಾಗ ಬಡವರ ಪರ ಮಾಡುವ ಕೆಲಸವೇ ಅತಿ ಮುಖ್ಯ ಅಂತಹವರನ್ನು ಸಾವಿನ ನಂತರವೂ ಸಮಾಜ ಸ್ಮರಿಸುತ್ತದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿ ಪಿ. ಹೇಳಿದರು. ದೊಡ್ಡಬಳ್ಳಾಪುರ ಪಿಎಸ್ಐ ಜಗದೀಶ್ ವೃತ್ತದಲ್ಲಿ ದಿ. ಜಗದೀಶ್ ಅವರ 8ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪೊಲೀಸ್ ಇಲಾಖೆ ಮೇಲೆ ಅಪನಂಬಿಕೆ ಹೆಚ್ಚು ಆದರೆ, ಪೊಲೀಸ್ ಇಲಾಖೆಯ ಕುರಿತು ಇಲ್ಲಿನ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ನನ್ನ 25 ವರ್ಷಗಳ ಸೇವಾವಧಿಯಲ್ಲಿ ಆದ ಅನುಭವಗಳಿಗಿಂತ ದೊಡ್ಡಬಳ್ಳಾಪುರದ ಈ ಎರಡು ತಿಂಗಳ ಅನುಭವ ಸಂಪೂರ್ಣ ವ್ಯತಿರಿಕ್ತವಾಗಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಸಾವಿನ ಬಳಿಕವೂ ಎಂಟು ವರ್ಷಗಳಿಂದ ಅವರ ಸೇವೆ ಸ್ಮರಿಸುತ್ತಾ ಘಟನೆಯನ್ನು ಜೀವಂತವಾಗಿಡಲಾಗಿದೆ. ದಿ.ಜಗದೀಶ್ ಅವರ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆ ಮಾಡುತ್ತಿರುವುದಕ್ಕೆ ವೈಯಕ್ತಿಕವಾಗಿ ಚಿರ ಋಣಿಯಾಗಿದ್ದೇನೆ ಎಂದರು. ಪಿಎಸ್ಐ ಜಗದೀಶ್ ವೃತ್ತವನ್ನು ನಿರ್ಮಾಣ ಮಾಡಿ, ಜಗದೀಶ್ ಅವರ ಪ್ರತಿಮೆ ಸ್ಥಾಪನೆಗೆ ನಗರಸಭೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ನೆಲಮಂಗಲ ಡಿವೈಎಸ್ಪಿ ಜಗದೀಶ ಮಾತನಾಡಿ, ಪಿಎಸ್ಐ ಜಗದೀಶ್ ಹಾಗೂ ನಾನು ಜೊತೆಯಲ್ಲೇ ತರಬೇತಿ ಪಡೆದು, ಕೆಲಸ ಮಾಡಿದವರು. ಜಗದೀಶ ಅವರನ್ನು ಕಳೆದುಕೊಂಡಿದ್ದು ಇಲಾಖೆಗೆ ತುಂಬಲಾರದ ನಷ್ಟ. ದೊಡ್ಡಬಳ್ಳಾಪುರದ ಸಂಘಟನೆಗಳು ಸಾರ್ವಜನಿಕರ ಸಹಕಾರದಲ್ಲಿ ಪ್ರತಿ ವರ್ಷ ಜಗದೀಶ್ ಅವರ ಪುಣ್ಯಸ್ಮರಣೆ ಮಾಡುತ್ತಿರುವುದು ಉತ್ತಮ ಕೆಲಸ ಎಂದರು.
ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಕಳೆದ ವರ್ಷದಿಂದ ಪಿಎಸ್ಐ ಜಗದೀಶ್ ಫೌಂಡೇಷನ್ ಟ್ರಸ್ಟ್ ಮಾಡಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಲೋಕಸೇವಾ ಆಯೋಗದ ಪರೀಕ್ಷೆ ಆಕಾಂಕ್ಷಿಗಳಿಗೆ ಅಗತ್ಯ
ತರಬೇತಿ (ಕೋಚಿಂಗ್) ನೀಡುವ ಉನ್ನತ ಆಲೋಚನೆ ಇದೆ. ಸಮಾಜಕ್ಕಾಗಿ ಜೀವ ತೆತ್ತವರನ್ನು ಸಮಾಜ ಎಂದೂ ಮರೆಯಬಾರದು. ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ದಿ. ಜಗದೀಶ್ ತಂದೆ ಶ್ರೀನಿವಾಸಯ್ಯ, ತಾಯಿ ಕಮಲಮ್ಮ ಪತ್ನಿ ರಮ್ಯಾ ಮಕ್ಕಳಾದ ಚಿನ್ಮಯಿ, ಶುಭಾಷಿಣಿ ಇ ಸಂದರ್ಭದಲ್ಲಿ ಉಪಸ್ಥಿತರಿದ್ದರು.