ಕತಾರ್‌ನಲ್ಲಿ ‘ಕನ್ನಡ ರಾಜ್ಯೋತ್ಸವ’; ಹೀಗೊಂದು‌ ಆಕರ್ಷಣೆ.. ‘ಪ್ರೇಮಲೋಕ-2’ ಸುಳಿವು

ಕತಾರ್: ಕರ್ನಾಟಕ ಸಂಘ ಕತಾರ್, ೬೮ ನೇ ಕನ್ನಡ ರಾಜ್ಯೋತ್ಸವನ್ನು  ಅದ್ದೂರಿಯಾಗಿ ಆಚರಿಸಿತು. ದೋಹಾದ ಡಿ.ಪಿಎಸ್ ಶಾಲೆಯ 1500ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಆಡಳಿತ ಮಂಡಳಿಯಿಂದ ಕನ್ನಡದ ದೀಪ ಹಚ್ಚುವ ಹಾಗೂ ಕೆ.ಎಸ್.ನಿಸಾರ್ ಅಹ್ಮದ್ ರಚಿತ ಜೋಗದ ಸಿರಿ ಬೆಳುಕಿನಲ್ಲಿ ಗಾನ ಮತ್ತು ಸಂಘದ ಅಧ್ಯಕ್ಷರಾದ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾದ ಕಾರ್ಯಕ್ರಮವು ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್ ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಕರ್ಷಣೆ ಪಡೆಯಿತು.

ಸಭೆಯನ್ನು ಸ್ವಾಗತ ಮಾಡುತ್ತ ಮಹೇಶ್ ಗೌಡ ಅವರು ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಮುಂದಿನ ವರ್ಷ ಕರ್ನಾಟಕ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ, ಈ ಸಂಭ್ರಮವನ್ನು ವಿಜರುಮಬನೆಯಿಂದ ನಡೆಸಿಕೊಡುವುದಾಗಿ ಸಭೆಗೆ ತಿಳಿಸಿದರು. ಕತಾರ್ ನಲ್ಲಿನ ಭಾರತೀಯ ಅಂತರ ರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವ ಶಿಕ್ಷಕ ಶಿಕ್ಷಕಿಯರಿಗೆ ಧನ್ಯವಾದಗಳನ್ನು ತಿಳಿಸಿ ಅವರಿಗೆ ಸ್ಮರಣ ಫಲಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡದ ಪ್ರಸಿದ್ದ ಬರಹಗಾರರು ಹಾಗೂ ಪತ್ರಕರ್ತರಾದ ಜೋಗಿ ಖ್ಯಾತಿಯ ಗಿರೀಶ್ ರಾವ್ ಹತ್ವಾರ್ ಹಾಗೂ ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರು ಭಾಗವಹಿಸಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಮಣಿಕಂಠನ್, ಉಪಾಧ್ಯಕ್ಷರು ಸುಬ್ರಮಣ್ಯ ಹೆಬ್ಬಾಗೆಲು, ಐಸಿಬಿಫ ಅಧ್ಯಕ್ಷ ಶಾನವಸ್ ಬವ, ಕರ್ನಾಟಕ ಸಂಘದ ಸಲಹಾ ಮಂಡಳಿ ಸದಸ್ಯರು, ಸೋದರ ಸಂಸ್ಥೆಗಳ ಅಧ್ಯಕ್ಷರು ರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡರು.

ಬರಲಿದೆ ‘ಪ್ರೇಮಲೋಕ-2’

ರವಿಚಂದ್ರನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮಹೇಶ್ ಗೌಡ ಅವರ ಪ್ರೀತಿಯ ಕರೆ ಅವರನ್ನು ಕತಾರ್ ಗೆ ಬರುವಂತೆ ಪ್ರೇರೇಪಿಸಿದ್ದು ಹಾಗೂ ಅವರ ಕತಾರ್ ನ ಪ್ರವಾಸ ನೆನಪಿನಲ್ಲಿ ಉಳಿಯುವಂತದ್ದು ಎಂದು ಸಭೆಗೆ ತಿಳಿಸಿದರು. ಅವರ ತಂದೆಯ ಜೀವನ ಶೈಲಿಯನ್ನು ನೆನೆಸಿಕೊಂಡ ಅವರು, ಮುಂಬರುವ ದಿನಗಳಲ್ಲಿ ‘ಪ್ರೇಮಲೋಕ ಚಿತ್ರದ ಬಾಗ 2’ ನಿರ್ಮಿಸಿ ಬಿಡುಗಡೆಗೊಳಿಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ  ದೀಪಕ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರಾದ ಸಂಜನಾ ಜೀವನ್ ಅವರು ಸಂಯೋಜಿಸಿದ ರವಿಚಂದ್ರನ್ ಅವರ ಹದಿನಾರು ಪ್ರಖ್ಯಾತ ಹಾಡುಗಳ ನೃತ್ಯ ಮಾಲೆಯು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷರ ಹಾಗೂ ಮುಖ್ಯ ಅತಿಥಿಗಳು ರವಿಚಂದ್ರನ್ ಅವರಿಂದ ಮೆಚ್ಚುಗೆ ಪಡೆಯಿತು.

ಉದಯೋನ್ಮುಖ ಗಾಯಕರು ಭೂಮಿಕಾ ಮಧುಸೂದನ್ ಹಾಗೂ ಶ್ರೀನಿಧಿ ಶಾಸ್ತ್ರಿ ಅವರು ಸಂಗೀತ ಸಂಜೆ ನೆಡೆಸಿಕೊಟ್ಟರು. ಕಾರ್ಯಕ್ರಮ ನಿರ್ವಹಣೆಯನ್ನು ಪ್ರಸಿದ್ದ ನಿರೂಪಕರಾದ ಸವಿ ಪ್ರಕಾಶ್ ಅವರು ನಡೆಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಘದ  ಸಾಂಸ್ಕೃತಿಕ   ಕಾರ್ಯದರ್ಶಿ ಸುಶೀಲ ಸುನಿಲ್ ಅವರು ನೆರವೇರಿಸಿದರು.

Related posts