ಮಲ್ಯ ಸಾಲ ಮನ್ನಾ ಆರೋಪ; ಕೈ ನಾಯಕರಿಗೆ ಕೇಂದ್ರ ಸಚಿವರ ಎದಿರೇಟು

ದೆಹಲಿ: ವಿಜಯ ಮಲ್ಯ ಸೇರಿದಂತೆ ಉದ್ಯಮಿಗಳ ಬಹುಕೋಟಿ ಸಾಲಗಳನ್ನು ಮನ್ನಾ ಮಾಡಲಾಗಿದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ಕುರಿತಂತೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀಯನ್ನು ಕೇಂದ್ರ ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೆಹಿಲ್ ಚೊಕ್ಸಿ, ವಿಜಯ ಮಲ್ಯ, ನೀರವ್ ಮೋದಿ ಸಹಿತ ಹಲವಾರು ಮಂದಿ ಉದ್ಯಮಿಗಳ ಸುಮಾರು 68,607 ಕೋಟಿ ರೂಪಾಯಿಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸುರ್ಜಿವಾಲ ಮೊದಲಾದವರು ಆರೋಪಿಸಿದ್ದರು. ರಿಸರ್ವ್ ಬ್ಯಾಂಕ್ ಆರ್ಟಿಐ ಅಡಿ ನೀಡಿದ ಮಾಹಿತಿ ಉಲ್ಲೇಖಿಸಿ ಕೈ ನಾಯಕರು ಈ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸ್ಪಷ್ಟಪಡಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಸಾಲ ಮನ್ನಾ ಬೇರೆ, ಲೆಕ್ಕದ ಪುಸ್ತಕಗಳಿಂದ ಅದನ್ನು ತೆಗೆದುಹಾಕುವುದು ಬೇರೆ ಎಂದು ಅವರು ಹೇಳಿದ್ದಾರೆ. ಈ ಎರಡು ಕ್ರಮಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವ ಪ್ರಕಾಶ್ ಜಾವಡೇಕರ್, ಈ ಕುರಿತಂತೆ ರಾಹುಲ್ ಗಾಂಧಿಯವರು ಚಿದಂಬರಂ ಅವರಂಥವರಿಂದ ಟ್ಯೂಷನ್ ಪಡೆಯಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೊಂದೆಡೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಬಹುತೇಕ ಸುಸ್ತಿದಾರರು ಕಾಂಗ್ರಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯ ಫೋನ್ ಬ್ಯಾಂಕಿಂಗ್‌ನಿಂದ ಲಾಭ ಪಡೆದವರಾಗಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಅವರು ಎದಿರೇಟು ನೀಡಿದ್ದಾರೆ.

Related posts