ಭಾರೀ ಮಳೆ: ಸಕಾಲದಲ್ಲೇ ಪರಿಹಾರಕ್ಕೆ ಸರ್ಕಾರ ಕ್ರಮ

ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಭಾರೀ ಹಾನಿಯುಂಟಾಗಿದೆ. ಹಲವೆಡೆ ಭೂ ಕುಸಿತ ಸಂಭವಿಸಿದ್ದು ಅನೇಕ ಮನೆಗಳಿಗೂ ಹಾನಿಯಾಗಿವೆ.

ಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು‌ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಿಎಂ ಸೂಚನೆ ನೀಡಿದ್ದಾರೆ. ಕ್ಷೇತ್ರ ಬಿಟ್ಟು ಹೋಗದೆ, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಭಾಗಶಃ ಹಾನಿಯಾಗಿದ್ದಾರೆ ಹಾನಿಗೆ ಅನುಗುಣವಾಗಿ ಪರಿಹಾರ ವಿತರಿಸಬೇಕು‌ ಹಾಗು ಈಗಾಗಲೇ ಜಿಲ್ಲಾ ಕೇಂದ್ರಗಳ ಹಾಸ್ಟೆಲ್, ಶಾಲಾ-ಕಾಲೇಜುಗಳು ಕೋವಿಡ್ ಕೇಂದ್ರಗಳಾಗಿರುವುದರಿಂದ ಹಳ್ಳಿಗಳಲ್ಲಿರುವ ಶಾಲಾ-ಕಾಲೇಜುಗಳನ್ನು ನಿರಾಶ್ರಿತರ ಕೇಂದ್ರಗಳನ್ನಾಗಿಸಿ, ಅಲ್ಲಿ‌ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಸ್ಥಳದಲ್ಲಿಯೇ ಪರಿಹಾರ ವಿತರಣೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಬೇಕು, ಈಗಾಗಲೇ 50 ಕೋಟಿ ಹಣ ಬಿಡುಗಡೆ ಮಾಡಿದ್ದು ಅಗತ್ಯವಿದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡುವುದಾಗಿ ಹೇಳಿರುವ ಸಿಎಂ, ಅತಿ ತುರ್ತು ಕೆಲಸಗಳಿಗೆ ಉಸ್ತುವಾರಿ ಸಚಿವರುಗಳೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ

ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ಸರ್ವೆ‌ ಮಾಡಿ ವರದಿ ಕೊಡಬೇಕು, ಪ್ರತಿದಿನ‌ ಒಟ್ಟು ಹಾನಿಯ ಬಗ್ಗೆಯೂ ವರದಿ ಕೊಡಬೇಕು ಅಂತ ಮಾನ್ಯ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

 

Related posts