ಆಪರೇಷನ್ ಸಿಂಧೂರ್ ಯಶಸ್ವಿ: 9 ಉಗ್ರ ನೆಲೆಗಳ ನಾಶ, 100 ಭಯೋತ್ಪಾದಕರ ಹತ್ಯೆಯಾಗಿದೆ ಎಂದ ಕೇಂದ್ರ

ನವದೆಹಲಿ: ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ 9 ಉಗ್ರ ನೆಲೆಗಳನ್ನು ನಾಶಪಡಿಸಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಚರ್ಚೆಯಲ್ಲಿ ಭಾಗವಹಿಸಿದ ಸಚಿವರು, ಈ ಕಾರ್ಯಾಚರಣೆ ದೇಶದ ಭದ್ರತಾ ವ್ಯವಸ್ಥೆಯ ಶಕ್ತಿ ಹಾಗೂ ತಾಕತ್ತನ್ನು ಮತ್ತೊಮ್ಮೆ ಪ್ರತಿಪಾದಿಸಿದೆ ಎಂದು ಹೇಳಿದರು. “ಪಾಕಿಸ್ತಾನವು ಯಾವುದೇ ಗುರಿಯನ್ನು ಹೊಡೆಯಲು ವಿಫಲವಾಯಿತು. ನಮ್ಮ ಯಾವುದೇ ನಿರ್ಣಾಯಕ ಆಸ್ತಿಗೆ ಹಾನಿಯಾಗಿಲ್ಲ. ನಮ್ಮ ಭದ್ರತಾ ವ್ಯವಸ್ಥೆ ಅಜೇಯವಾಗಿತ್ತು,” ಎಂದು ತಿಳಿಸಿದರು.

ಭಾರತವು ತನ್ನ ರಾಜಕೀಯ ಹಾಗೂ ಸೈನಿಕ ಗುರಿಗಳನ್ನು ಸಂಪೂರ್ಣ ಸಾಧಿಸಿದ ಬಳಿಕವೇ ಕಾರ್ಯಾಚರಣೆ ವಿರಾಮಗೊಂಡಿತು. ಯಾವುದೇ ಬಾಹ್ಯ ಒತ್ತಡದ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ,” ಎಂದು ಸ್ಪಷ್ಟಪಡಿಸಿದರು.

ಮೇ 10ರಂದು ಭಾರೀ ಹೊಡೆತ ಅನುಭವಿಸಿದ ನಂತರ ಪಾಕಿಸ್ತಾನ ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿ ಕಾರ್ಯಾಚರಣೆಗೆ ವಿರಾಮ ಕೇಳಿದ ಕಾರಣದಪ್ಪಟ್ಟೇ ಕಾರ್ಯಾಚರಣೆ ಸ್ಥಗಿತಗೊಂಡಿತು ಎಂದು ಅವರು ವಿವರಿಸಿದರು. “ಇದು ಕೊನೆಗೊಳ್ಳುವಿಕೆಯಾಗಿಲ್ಲ. ಭವಿಷ್ಯದಲ್ಲಿ ಪ್ರಚೋದನೆ ಇದ್ದರೆ ಕಾರ್ಯಾಚರಣೆ ಪುನರಾರಂಭವಾಗಲಿದೆ,” ಎಂದು ಎಚ್ಚರಿಸಿದರು.

ವಿರೋಧ ಪಕ್ಷದ ವರ್ತನೆಗೆ ಟೀಕೆ:

ಸಮಯೋಚಿತ ವಾಗಿ ಸೇನೆಯ ಶೌರ್ಯವನ್ನು ಶ್ಲಾಘಿಸಬೇಕಾಗಿರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ನಿಶ್ಬ್ದರಾಗಿರುವುದು ಗಂಭೀರ ವಿಷಯ ಎಂದು ಸಚಿವರು ಹೇಳಿದರು. “ಅವರು ನಮ್ಮ ಎಷ್ಟು ಜೆಟ್‌ಗಳನ್ನು ಕಳೆದುಕೊಂಡೆವು ಎಂಬುದನ್ನು ಕೇಳುತ್ತಾರೆ. ಆದರೆ, ನಾವು ಎಷ್ಟು ಶತ್ರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬುದನ್ನು ಕೇಳುವುದಿಲ್ಲ,” ಎಂದು ಪ್ರಶ್ನಿಸಿದರು.

“ಭಯೋತ್ಪಾದಕ ದಾಳಿಗಳ ಹಿಂದಿರುವ ಮಾಸ್ಟರ್‌ಮೈಂಡ್‌ಗಳನ್ನು ನಾವು ತಟಸ್ಥಗೊಳಿಸಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರ ಹೌದು. ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ಹಾನಿಗೊಳಗಾಗಿಲ್ಲ ಎಂಬುದೂ ಸ್ಪಷ್ಟವಾಗಿದೆ,” ಎಂದರು.

1971ರ ಯುದ್ಧದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರು ತೋರಿದ ವರ್ತನೆಯನ್ನು ಉಲ್ಲೇಖಿಸಿದ ಸಚಿವರು, “ಆ ಸಮಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿದ್ದರೂ, ಸರಕಾರದ ನೀತಿಗೆ ಬೆಂಬಲ ನೀಡಿತ್ತು. ಇಂದಿನ ವಿರೋಧ ಪಕ್ಷವೂ ಅಂತಹ ಸಂವೇದನಾಶೀಲತೆಯನ್ನು ತೋರಿಸಬೇಕಿತ್ತು” ಎಂದರು.

Related posts