ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಒಕ್ಕಲಿಗ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕಲಿಗ ಸಮುದಾಯದ ನಾಯಕರು ಮನವಿ ಮಾಡಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರ ನಿಯೋಗ ಸಿಎಂ ಅವರನ್ನು ಭೇಟಿಯಾಗಿ ಮುನಿರತ್ನ ವಿರುದ್ಧ ಕಮಿಷನ್ ದಂಧೆ, ಅತ್ಯಾಚಾರ, ಹನಿಟ್ರ್ಯಾಪ್, ಎಚ್‌ಐವಿ ಹರಡುವಿಕೆ ಸೇರಿದಂತೆ ವಿವಿಧ ಆರೋಪಗಳು ಇವೆ. ಹಾಗಾಗಿ, ಎಲ್ಲಾ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಮನವಿ ಮಾಡಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಕಚೇರಿ, ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಜಿ ಸಚಿವರಾದ ಮುನಿರತ್ನ ಅವರ ಮೇಲಿನ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸುವಂತೆ ಮನವಿ ಸಲ್ಲಿಸಿದರು ಎಂದು ತಿಳಿಸಿದೆ.