ರಾಜ್ಯಪಾಲರನ್ನು ವಾಪಸ್‌‍ ಕರೆಸಿಕೊಳ್ಳಿ; ಕೇಂದ್ರಕ್ಕೆ ಸಚಿವ ಶರಣಪ್ರಕಾಶ್‌ ಪಾಟೀಲ್‌ ಒತ್ತಾಯ

ರಾಯಚೂರು: ಸಚಿವ ಸಂಪುಟದ ನಿರ್ಣಯದ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆ (ಪ್ರಾಸಿಕ್ಯುಷನ್‌)ಗೆ ಅನುಮತಿ ನೀಡಿರುವ ರಾಜ್ಯಪಾಲರನ್ನು ತಕ್ಷಣವೇ ಕೇಂದ್ರ ಸರ್ಕಾರ ವಾಪಸ್‌‍ ಕರೆಸಿಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ, ಜೀವನೋಪಾಯ, ಕೌಶಲ್ಯಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್ ಒತ್ತಾಯಿಸಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ನಡೆದ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸುಪ್ರೀಂಕೋರ್ಟ್‌ನ ತೀರ್ಪಿನ ಪ್ರಕಾರ ಸಚಿವ ಸಂಪುಟದ ತೀರ್ಮಾನವನ್ನು ರಾಜ್ಯಪಾಲರು ಒಪ್ಪಿಕೊಳ್ಳಬೇಕು. ಆದರೆ ಸಂಪುಟದ ತೀರ್ಮಾನವನ್ನು ತಿರಸ್ಕರಿಸಿ ಅನುಮತಿ ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.

ರಾಜ್ಯಪಾಲರು ನೀಡಿದ್ದ ಶೋಕಾಸ್‌‍ ನೋಟಿಸ್‌‍ಗೆ ಸರ್ಕಾರ 60 ಪುಟಗಳ ಸಮರ್ಪಕ ಉತ್ತರ ನೀಡಿದೆ. ಇದನ್ನು ಪರಿಶೀಲಿಸದೆ ಕೇವಲ ದೂರದಾರರ ಮನವಿಯನ್ನು ಪರಿಶೀಲಿಸಿ ಪ್ರಾಸಿಕ್ಯೂಷನ್‌ಗೆ ಸಮತಿಸುವುದರ ಹಿಂದೆ ರಾಜಕೀಯ ಷಡ್ಯಂತರ ಅಡಗಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ದೇಶದಲ್ಲಿರುವ ಕಾಂಗ್ರೆಸೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ಷಡ್ಯಂತ್ರ ಮಾಡುತ್ತಿದೆ. ಐಟಿ, ಸಿಬಿಐ, ಇಡಿ ಮೂಲಕ ದಾಳಿ ನಡೆಸಿ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯಪಾಲರನ್ನು ನಡುವಳಿಕೆಗಳ ಬಗ್ಗೆ ಸುಪ್ರೀಂಕೋರ್ಟ್‌ ಅನೇಕ ಬಾರಿ ಛೀಮಾರಿ ಹಾಕಿದೆ. ರಾಜ್ಯಪಾಲರು ಸಂವಿಧಾನಬದ್ದವಾಗಿ ಆಡಳಿತ ನಡೆಸಬೇಕೆ ವಿನಃ ಕೇಂದ್ರ ಸರ್ಕಾರ ಇಲ್ಲವೇ ಯಾವುದೇ ಒಂದು ಪಕ್ಷದ ನಿರ್ದೇಶನದಂತೆ ಕೆಲಸ ಮಾಡಬಾರದು. ಥಾವರ್‌ಚಂದ್‌ ಗೆಹ್ಲೋಟ್‌ ಕೇಂದ್ರ ಸರ್ಕಾರದ ಬಿಜೆಪಿ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಡಾ ಪ್ರಕರಣದಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಸಿದ್ದರಾಮಯ್ಯನವರ ಪತ್ನಿ ಕಾನೂನುಬದ್ದವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಇದನ್ನು ಬಿಜೆಪಿ ಅವಧಿಯಲ್ಲೇ ನೀಡಲಾಗಿತ್ತು ಎಂದು ಹೇಳಿದರು. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ ನಿರಾಣಿ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ಕೋರಲಾಗಿತ್ತು. ಅವರ ವಿರುದ್ದ ರಾಜಪಾಲರು ಏಕೆ ಅನುಮತಿ ನೀಡಿಲ್ಲ ಎಂದು ಪ್ರಶ್ನಿಸಿದರು.

ನಾಲ್ಕು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ಸಿದ್ದರಾಮಯ್ಯನವರ ಮೇಲೆ ಒಂದೇ ಒಂದೂ ಕಪ್ಪುಚುಕ್ಕೆ ಇಲ್ಲ. ಹಿಂದುಳಿದ ನಾಯಕ ಎಂಬ ಕಾರಣಕ್ಕೆ ಬಿಜೆಪಿ-ಜೆಡಿಎಸ್‌‍ ವ್ಯವಸ್ಥಿತ ಷಡ್ಯಂತರ ಮಾಡುತ್ತಿವೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರತಿಪಕ್ಷಗಳ ನಾಯಕರು ನಮ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ನಡೆಸಿದರೆ ರಾಜ್ಯದಲ್ಲಿ ಈ ಎರಡೂ ಪಕ್ಷಗಳು ಧೂಳಿಪಟವಾಗಲಿವೆ ಎಂದು ಶರಣಪ್ರಕಾಶ್‌ ಪಾಟೀಲ್‌ ಎಚ್ಚರಿಕೆ ಕೊಟ್ಟರು.

ಪ್ರತಿಭಟನೆಯಲ್ಲಿ ಸಚಿವ ಎಸ್‌‍.ಭೋಸರಾಜ್‌, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಪಕ್ಷದ ಪ್ರಮುಖರು ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗಿದ್ದರು.

Related posts