‘ಸರ್ಕಾರ ಬೀಳುತ್ತೆ ಎಂಬ ಭಯ ಬೇಡ, ಜಾತಿ ಗಣತಿ ಬಿಡುಗಡೆ ಮಾಡಿ’; ಸಿಎಂಗೆ ಬಿ.ಕೆ.ಹರಿಪ್ರಸಾದ್ ಸಲಹೆ

ಬೆಂಗಳೂರು: ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಬೇಡ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಜಾತಿ ಗಣತಿ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸರ್ಕಾರಕ್ಕೆ ಸಕಲೆ ಮಡಿದ್ದಾರೆ.

ಬೆಂಗಳೂರಿನಲ್ಲಿ “ಮೀಸಲಾತಿಯ ಒಳಮುಖ ” ಪುಸ್ತಕ ಬಿಡುಗಡೆಗೊಳಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹಾಗೂ ಸಂವಿಧಾನವನ್ನು ಉಳಿಸುವುದು ನಮ್ಮ ಪಕ್ಷಕ್ಕೆ ಮೊದಲ ಆದ್ಯತೆಯಾಗಿರುವುದು ಸ್ಪಷ್ಟ. ಜಾತಿ ಗಣತಿ ಹಾಗೂ ಜನ ಗಣತಿಯನ್ನು ಅನುಷ್ಠಾನಗೊಳಿಸುವುದರ ಪರವಾಗಿ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಹೋರಾಟ ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಮೀಸಲಾತಿಯ ವಿಷಯದಲ್ಲಿ ರಾಜಿಯಾಗಲು ಸಾಧ್ಯವೇ ಇಲ್ಲ ಎಂದರು.

ಮಹಾತ್ಮ ಗಾಂಧಿ ಹಾಗೂ ನೆಹರೂ ಅವರ ಸಾಮಾಜಿಕ ನ್ಯಾಯ ಮತ್ತು ಸರ್ವಧರ್ಮ ಸಹ ಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಾ ವರ್ಗದವರಿಗೂ ಅನುಕೂಲ ಆಗಬೇಕು ಅನ್ನುವ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಜಾತಿ ಗಣತಿ ವಿಷಯದಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದರೆ ಚರ್ಚೆ ಮಾಡಿ ಸರಿ ಮಾಡಬೇಕು. ಇದನ್ನ ಮೊದಲಿನಿಂದಲೂ ಹೇಳುತ್ತಿದ್ದೇನೆ ಈಗಲೂ ಹೇಳುತ್ತಿದ್ದೇನೆ ಎಂದು ಹರಿಪ್ರಸಾದ್ ಅವರು ಸಲಹೆಯನ್ನು ಮುಂದಿಟ್ಟರು..

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಗೌರವಿಸುವವರು, ರಾಹುಲ್ ಗಾಂಧಿ ಅವರ ನಿಲುವಿಗೆ ಗೌರವ ನೀಡುವವರು ಜಾತಿ ಗಣತಿಯನ್ನು ಒಪ್ಪಲೇಬೇಕು. ವಿರೋಧ ಮಾಡುವವರು ಮಾಡುತ್ತಲೇ ಇರುತ್ತಾರೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ನೀಡಿದ ರಾಜ್ಯ ನಮ್ಮದು, ನಾಲ್ವಡಿಯವರಿಗಿಂತಲೂ ಮುಂಚೆ ನಮ್ಮ ರಾಜ್ಯದಲ್ಲಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಿದೆ ಎಂದ ಅವರು, ಜಾತಿ ಗಣತಿ ಬಿಡುಗಡೆ ಮಾಡುವುದು ನಮ್ಮ ಪಕ್ಷದ ಪ್ರಣಾಳಿಕೆ ಯಲ್ಲೇ ಘೋಷಣೆಯಾಗಿದೆ. ಸರ್ಕಾರ ವಿಳಂಬ ಮಾಡುವುದರಲ್ಲಿ ಅರ್ಥವೇ ಇಲ್ಲ. ಜಾತಿ ಗಣತಿ ವರದಿ ತತ್ತಕ್ಷಣ ಜಾರಿಗೊಳಿಸಬೇಕು. ಜಾತಿ ಗಣತಿ ವಿರೋಧ ಪ್ರಶ್ನೆ ಅಲ್ಲ, ಜಾತಿಗಣತಿ ಜಾರಿಯಿಂದ ಎಲ್ಲರಿಗೂ ಒಳ್ಳೆಯದಾಗುತ್ತೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಜಾತಿ ಗಣತಿಯನ್ನು ಜನಸಾಮಾನ್ಯರ ತೆರಿಗೆ ಹಣದಿಂದ ಮಾಡಲಾಗಿದೆ. ಪಕ್ಷದ ಪ್ರಣಾಳಿಕೆಯಲ್ಲಿ ಜಾತಿ ಗಣತಿ ವಿಚಾರ ಚರ್ಚೆಯಾಗಿದೆ. ಜಾರಿ ಮಾಡಲು ಅಡೆತಡೆಗಳ ಬಗ್ಗೆ ಯೋಚನೆ ಮಾಡಬಾರದು. ಸರ್ಕಾರ ಹೋಗುತ್ತೆ ಅಂದರೆ ಹೋಗಲಿ ಭಯ ಯಾಕೆ ಬೀಳಬೇಕಿದೆ. ಅಧಿಕಾರಕ್ಕಾಗಿ ನಾವು ರಾಜಿಯಾಗಬೇಕಿಲ್ಲ ಎಂದು ಪ್ರತಿಪಾದಿಸಿದ ಹರಿಪ್ರಸಾದ್, ಕಾಂಗ್ರೆಸ್ ಪಕ್ಷ ಪ್ರಾರಂಭ ಆದಾಗ 77 ಜನ ಶುರು ಮಾಡಿದರು. ಮಹಾತ್ಮ ಗಾಂಧಿಯವರ ನಾಯಕತ್ವದಲ್ಲಿ ದಲಿತರು, ಮಹಿಳೆಯರು, ಕಾರ್ಮಿಕರು, ಬಹು ಸಂಖ್ಯಾತರು ಎಲ್ಲರನ್ನು ಸೇರಿಸಿಕೊಂಡರು, ಬಳಿಕ ಪಕ್ಷ ದೊಡ್ಡದಾಯಿತು. ಈಗ ಜಾತಿ ಗಣತಿ ಒಪ್ಪಿಕೊಂಡರೆ ಹಿಂದುಳಿದ ವರ್ಗದವರಿಂದಲೂ ಪಕ್ಷಕ್ಕೆ ಬಲ ಬರುತ್ತದೆ ಎಂದರು.

ಸರ್ಕಾರ ಮೀನಾಮೇಷಕ್ಕೆ ಒಳಗಾಗದೆ ಹಿಂದುಳಿದ ವರ್ಗದ ವರದಿಯನ್ನು ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

Related posts