ಒಳ ಮೀಸಲಾತಿ ವಿಚಾರದಲ್ಲಿ ‘ಕೈ’ ಸಮಯಸಾಧಕತನ: ಬಿಜೆಪಿ ಕಿಡಿ

ಬೆಂಗಳೂರು: ಒಳ ಮೀಸಲಾತಿ ವಿಚಾರ ಸಂಪುಟದ ಮುಂದಿದೆ. ಈ ವಿಷಯ ಪರಿಶೀಲನೆಗೆ ಐದು ಸದಸ್ಯರ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ ಎಂದು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ದಿನದಲ್ಲಿ ಸಮಿತಿ ರಚಿಸಿದ್ದಾರೆ. ಸಂಪುಟ ಉಪ ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಕೂಡಲೇ ಸಮಿತಿ ರಚಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಜನರ ಒತ್ತಾಯ ಅರಿತು ಕೂಡಲೇ ಸಮಿತಿ ರಚಿಸಿದ್ದಾರೆ. ಒಂದೆರಡು ತಿಂಗಳಲ್ಲಿ ವರದಿ ಸಿಗಲಿದೆ ಎಂದು ಅವರು ವಿವರಿಸಿದರು. ನಮ್ಮ ಸರಕಾರದ ಅವಧಿಯಲ್ಲಿ ಇದರ ಸಾಧಕ- ಬಾಧಕಗಳನ್ನು ಪರಿಗಣಿಸಿ ಒಮ್ಮತದ ತೀರ್ಮಾನ ಮಾಡಿ ಅನುಷ್ಠಾನ ಮಾಡುತ್ತೇವೆ. ಕಾಂಗ್ರೆಸ್‍ನವರು ಸಮಯಸಾಧಕತನ ಮಾಡುತ್ತಾರೆ ಎಂದು ಆಕ್ಷೇಪಿಸಿದರು.

ಜನರನ್ನು ಒಡೆದು, ಜಾತಿಗಳನ್ನು ಒಡೆದು ಆಡಳಿತ ಮಾಡುವುದೇ ಸಿದ್ದರಾಮಯ್ಯ ಅವರ ವೃತ್ತಿಯಾಗಿತ್ತು ಎಂದು ಆರೋಪಿಸಿದರು. ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಹಲವು ದಿನಗಳಿಂದ ಹೋರಾಟ ನಡೆದಿದೆ. ಇದು ಇವತ್ತಿನ ವಿಷಯವಲ್ಲ. 20- 25 ವರ್ಷಗಳಿಂದ ಸತತ ಹೋರಾಟ ನಡೆಯುತ್ತಲೇ ಬಂದಿತ್ತು. ಹಿಂದಿನ ಸರಕಾರಗಳೂ ಆಯೋಗ ರಚನೆ ಮಾಡಿ ವರದಿ ಸಲ್ಲಿಕೆಯಾಗಿ ಹೆಚ್ಚು ಕಡಿಮೆ 9 ವರ್ಷಗಳೇ ಆಗಿವೆ. ಆದರೂ ಕೂಡ ವರದಿ ಸದನದಲ್ಲಿ ಚರ್ಚೆಗೆ ಬಂದಿಲ್ಲ ಎಂದು ಆಕ್ಷೇಪಿಸಿದರು.

ಒತ್ತಡ ಹೆಚ್ಚಾಗುತ್ತಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರರು ಈ ಸಮಸ್ಯೆ ಪರಿಹಾರಕ್ಕೆ ಮುಂದಾದರು. ಹರಿಹರದಿಂದ ಹೋರಾಟ ಮಾಡುವವರು ಈಗಾಗಲೇ ಬೆಂಗಳೂರು ತಲುಪಿದ್ದಾರೆ. ಕಾಂಗ್ರೆಸ್‍ನ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಮಹದೇವಪ್ಪ ಸೇರಿ ಹಲವು ಮುಖಂಡರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಸದಾಶಿವ ಆಯೋಗದ ವರದಿಯನ್ನು ಪುರಸ್ಕರಿಸಿ ಮುಂದೆ ಒಳ ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು. ಆರು ವರ್ಷಗಳ ಕಾಲ ವರದಿಯನ್ನು ಹಾಗೇ ಇಟ್ಟುಕೊಂಡು ಚರ್ಚೆಗೆ ತೆಗೆದುಕೊಂಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಮಳೆ ಜೋರಾಗಿದೆ; ಹೋರಾಟನಿರತರು ಸರಕಾರದ ಸಕಾರಾತ್ಮಕ ಸ್ಪಂದನೆಯನ್ನು ಗಮನಿಸಿ ಹೋರಾಟ ರದ್ದು ಮಾಡಬೇಕೆಂದು ಅವರು ಮನವಿ ಮಾಡಿದರು.

Related posts