ನಕಲಿ ಮೀಸಲಾತಿ ಮೂಲಕ ರಾಜ್ಯದ ಜನರಿಗೆ ಬೊಮ್ಮಾಯಿ ಸರ್ಕಾರ ಮೋಸ; ಸುರ್ಜೇವಾಲ

ಬೆಂಗಳೂರು: ನಕಲಿ ಮೀಸಲಾತಿ ಮೂಲಕ ರಾಜ್ಯದ ಜನರಿಗೆ ಬೊಮ್ಮಾಯಿ ಸರ್ಕಾರ ಮೋಸ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಿದ್ಧಾಂತವನ್ನು ದೇಶ ಹಾಗೂ ವಿದೇಶಗಳಲ್ಲಿ ಪಾಲಿಸಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅಗೌರವಿಸಿದೆ. ನಕಲಿ ಮೀಸಲಾತಿ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ನಕಲಿ ಮೀಸಲಾತಿ ಮೂಲಕ ಲಿಂಗಾಯತ, ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ, ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿದೆ. ಬಿಜೆಪಿ ಸರ್ಕಾರದ ಈ ದ್ರೋಹ ಈಗ ಬಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ ಕ್ಷಮಿಸಲಾಗದ ದ್ರೋಹ ಬಗೆದಿದೆ. ಈ ಸರ್ಕಾರ ಒಕ್ಕಲಿಗ, ಲಿಂಗಾಯತ, ಪರಿಶಿಷ್ಟ ಜಾತಿ- ಪಂಗಡಗಳಿಗೆ ಹೆಚ್ಚಳ ಮಾಡಲಾಗಿದ್ದ ಮೀಸಲಾತಿಯನ್ನು ದಿನಾಂಕ 13-04-2023ರಂದು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಮುಂದಿನ ವಿಚಾರಣೆವರೆಗೂ ತಡೆ ಹಿಡಿಯುವ ಮೂಲಕ ಬೊಮ್ಮಾಯಿ ಅವರ ಸರ್ಕಾರ ಈ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದ ಸುರ್ಜೆವಾಲ, ಕಳೆದ ಮೂರು ಪತ್ರಿಕಾಗೋಷ್ಠಿಗಳಲ್ಲಿ ಕಾಂಗ್ರೆಸ್ ಪಕ್ಷ ಹೇಳಿಕೊಂಡು ಬಂದ ಎಲ್ಲ ಅಂಶಗಳು ಈಗ ನಿಜವಾಗಿವೆ. ಬೊಮ್ಮಾಯಿ ಹಾಗೂ ಮೋದಿ ಅವರು ಡಬಲ್ ಇಂಜಿನ್ ಸರ್ಕಾರ ರಾಜ್ಯದ ಜನರಿಗೆ ಡಬಲ್ ದ್ರೋಹ ಬಗೆದಿವೆ. ಮೀಸಲಾತಿ ಹೆಸರಲ್ಲಿ ಬಿಜೆಪಿ ಸರ್ಕಾರ ಈ ಸಮುದಾಯಗಳ ಜನರನ್ನು ಮೋಸ ಮಾಡಿದೆ. ಈ ಸರ್ಕಾರ ನೀಡಿರುವ ಮೀಸಲಾತಿ ಹೆಚ್ಚಳ ಸಂವಿಧಾನ ಹಾಗೂ ಕಾನೂನು ಮಾನ್ಯತೆ ಪಡೆಯುವುದಿಲ್ಲ. ಕೇವಲ ಸುಳ್ಳಿನ ಮೀಸಲಾತಿ ಮೂಲಕ ಬಿಜೆಪಿ ಸರ್ಕಾರ ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ ಲಾಲಿಪಾಪ್ ನೀಡುವ ಪ್ರಯತ್ನ ಮಾಡಿದೆ. ಮತಬ್ಯಾಂಕ್ ರಾಜಕಾರಣ ಮಾಡುವ ಬೊಮ್ಮಾಯಿ ಸರ್ಕಾರ ತನ್ನ ಮೀಸಲಾತಿ ತೀರ್ಮಾನಕ್ಕೆ ತಡೆ ನೀಡಿದೆ ಎಂದರು.

ಬೊಮ್ಮಾಯಿ ಅವರೇ ನಕಲಿ ಮೀಸಲಾತಿ ಮೂಲಕ ಯಾಕೆ ದ್ರೋಹ ಮಾಡಿದ್ದೀರಿ ಎಂದು ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಪ್ರಶ್ನಿಸುತ್ತಿದ್ದಾರೆ. 136ನೇ ಅಂಬೇಡ್ಕರ್ ಜಯಂತಿಯಂದು ನಿಮ್ಮ ಸರ್ಕಾರ ರಾಜ್ಯದ ಜನರಿಗೆ ಎಂತಹ ಮೋಸ ಎಸಗಿದೆ? ಇಡೀ ಮೀಸಲಾತಿ ವ್ಯವಸ್ಥೆಯನ್ನೇ ನಾಶ ಮಾಡುವ ಷಡ್ಯಂತ್ರ ಮಾಡಲಾಗಿದೆ ಎಂದ ಅವರು, ಕಳೆದ 90 ದಿನಗಳಲ್ಲಿ ಮೀಸಲಾತಿ ವರ್ಗೀಕರಣವನ್ನು 3 ಬಾರಿ ಬದಲಿಸಲಾಗಿದೆ. ದೇಶ ಯಾವುದೇ ಸರ್ಕಾರಗಳು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಬಾರಿ ಮೀಸಲಾತಿ ವರ್ಗೀಕರಣ ಬದಲಾವಣೆ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಈ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟಿ ಜಗಳವಾಡುವಂತೆ ಮಾಡಿ ಗೊಂದಲ ಸೃಷ್ಟಿಸಿ ಮತಗಳಿಸುವ ಪ್ರಯತ್ನ ಮಾಡಿದೆ ಎಂದರು.

ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿತು. ಈ ಸಮಿತಿ ವರದಿ ನೀಡುವ ಸಮಯದಲ್ಲಿ ಆಪರೇಶನ್ ಕಮಲ ನಡೆದು ಮೈತ್ರಿ ಸರ್ಕಾರ ಪತನವಾಯಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 4 ವರ್ಷಗಳ ಕಾಲ ಈ ಸಮಿತಿ ವರದಿಯ ಬಗ್ಗೆ ಬಿಜೆಪಿ ಸರ್ಕಾರ ಮೌನವಾಗಿ ಕುಳಿತಿತ್ತು. ಈ ವಿಚಾರವಾಗಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರು ಈ ವಿಚಾರವನ್ನು ಎತ್ತಿದಾಗ ಬೆಳಗಾವಿ ಅಧಿವೇಶನದಲ್ಲಿ ಅರೆಬೆಂದ ಕಾಯ್ದೆಯನ್ನು ಹೊರತಂದರು. ನಂತರ ಈ ಕಾನೂನನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಲು ಮರೆತರು ಎಂದವರು ಹೇಳಿದರು.

ಬಿಜೆಪಿ ಸರ್ಕಾರ 26-12-2022 ರಂದು ನಾಗಮೋಹನ್ ದಾಸ್ ಅವರ ವರದಿ ಒಪ್ಪಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಕೆ ಮಾಡಲು ಸರ್ಕಾರ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಆದರೆ ಇದರ ಹಿಂದೆ ಬೊಮ್ಮಾಯಿ ಅವರ ಅಪ್ರಾಮಾಣಿಕತೆ ಇತ್ತು. ಇದೇ ಕಾರಣಕ್ಕೆ ಅವರು ತಮ್ಮ ಕಾನೂನಿನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಿಲ್ಲ. ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಲಿಲ್ಲ. ರಾಜ್ಯ ಸರ್ಕಾರದ ಈ ತೀರ್ಮಾನದಿಂದ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ರಷ್ಟಾಗಿದ್ದು, ಇದು ಶೇ.50 ಮೀಸಲಾತಿ ಮಿತಿ ಮೀರಿದಂತಾಗಿದೆ ಎಂದ ಸುರ್ಜಿವಾಲ,  14-03-2023ರಂದು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ, ಕೇಂದ್ರ ಸರ್ಕಾರ ಈ ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸುತ್ತೇವೆ ಎಂದು ತಿಳಿಸಿದ್ದರು. ನಂತರ ಅವರು 3ಎ ವರ್ಗೀಕರಣವನ್ನು 2ಸಿ ಎಂದು, 3ಬಿ ವರ್ಗೀಕರಣವನ್ನು 2ಡಿ ಎಂದು ಹೊಸದಾಗಿ ಮಾಡಿದರು. ನಂತರ 24-03-2023ರಂದು ಸರ್ಕಾರ ತನ್ನ ಕಡೇಯ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ವರ್ಗೀಕರಣ ಬದಲಿಸಿ, ಅಲ್ಪಸಂಖ್ಯಾತರ ಮೀಸಲಾತಿ ಕಸಿದು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳಿಗೆ ತಲಾ 2% ಹಂಚಿಕೆ ಮಾಡಲಾಗಿತ್ತು ಎಂದರು.

ಮೋದಿ ಅವರು ಅಂಬೇಡ್ಕರ್ ಅವರ ಮೀಸಲಾತಿಯನ್ನು ನಾಶ ಮಾಡುತ್ತಿದ್ದಾರೆ. ಈಗ ಸರ್ಕಾರ ತನ್ನ ಆದೇಶವನ್ನು ತಡೆಹಿಡಿದಿರುವ ಕಾರಣ ಒಕ್ಕಲಿಗರು, ಲಿಂಗಾಯತರ, ಪರಿಶಿಷ್ಟರ ಹಾಲಿ ಮೀಸಲಾತಿಯೂ ತಡೆ ಹಿಡಿಯಲಾಗಿದ್ದು ಈ ತಡೆಯನ್ನು ರದ್ದು ಮಾಡುವವರೆಗೂ ಈ ಯಾವುದೇ ಸಮುದಾಯಗಳಿಗೆ ಮೀಸಲಾತಿಯೇ ಇಲ್ಲವಾಗಿದೆ. ಈ ಸಮುದಾಯಗಳ ಜನರು ಎಲ್ಲಿಗೆ ಹೋಗಬೇಕು? ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಉತ್ತರಿಸಬೇಕು. ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ಎಲ್ಲಾ ಮೀಸಲಾತಿಯನ್ನು ಹಿಂಪಡೆಯುವುದಾಗಿ ಹೇಳುತ್ತಿದ್ದಾರೆ. ಇದೇನಾ 132ನೇ ಅಂಬೇಡ್ಕರ್ ಜಯಂತಿಯಂದು ಬೊಮ್ಮಾಯಿ ಅವರು ರಾಜ್ಯದ ಜನರಿಗೆ ನೀಡುವ ಉಡುಗೊರೆ? ಎಂದು ಪ್ರಶ್ನಿಸಿದ ಸುರ್ಜೆವಾಲ, ಇದು ಮೂರ್ಖತನದ ಪರಮಾವಧಿಯಾಗಿದ್ದು, ಉದ್ದೇಶಪೂರ್ವಕವಾಗಿ ಈ ಮೂರ್ಖತನವನ್ನು ಪ್ರದರ್ಶಿಸಲಾಗಿದೆ. ಮುರ್ಖರಿಂದ ನಡೆಸುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ. ಬೊಮ್ಮಾಯಿ ಅವರೇ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರ ಮೀಸಲಾತಿಯನ್ನು ಸಂಪೂರ್ಣವಾಗಿ ತಡೆದಿರುವ ಹಿನ್ನೆಲೆಯಲ್ಲಿ ನೀವು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Related posts