‘ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ ಭಾರತ ಮಾತೆಗೆ ಸಲ್ಲಿಸುವ ನಿಜವಾದ ಗೌರವ’; ರಾಮಲಿಂಗ ರೆಡ್ಡಿ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಗ್ಗೆ ಬಿಜೆಪಿ ನಾಯಕ ರವಿಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರ ಅಸಂಸ್ಕೃತಿ ಮತ್ತು ಅನಾಚಾರದ ಹೇಳಿಕೆಗಳಿಗೆ ಈ ಪ್ರಕರಣ ಮತ್ತೊಂದು ಸೇರ್ಪಡೆಯಾಗಿದ್ದು, ನಾಚಿಕೆಗೇಡಿನ ವರ್ತನೆ, ಕೊಳಕು ಭಾಷಾ ಬಳಕೆಯ ಪು‌ನರಾವರ್ತನೆಯಾದಂತಿದೆ ಎಂದು ಟೀಕಿಸಿದ್ದಾರೆ.

ವಿಧಾನ‌ಪರಿಷತ್ ಸದಸ್ಯರಾದ ರವಿಕುಮಾರ್, ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು ಕೆಲವು ತಿಂಗಳುಗಳ ಹಿಂದೆಯಷ್ಟೇ ಅವಹೇಳನಕಾರಿಯಾಗಿ ಮಾತನಾಡಿದ್ದು, ನ್ಯಾಯಾಲಯವು ಛೀಮಾರಿ‌ ಹಾಕಿದ ನಂತರ ಬೇಷರತ್ ಕ್ಷಮೆ‌ ಕೇಳಿದ್ದರು. ಮತ್ತೊಂದು ಪ್ರಕರಣದಲ್ಲಿ ಸಿ.ಟಿ.ರವಿ ಅವರು ಸದನದಲ್ಲಿ ಮಹಿಳಾ‌ ಮಂತ್ರಿ ಕುರಿತು ಆಡಿದ ಮಾತು ಅಸಹನೀಯ, ಸಂವೇದನಾರಹಿತ, ಸಮಾಜಕ್ಕೆ ಆಘಾತಕಾರಿಯಾದ ನಡವಳಿಕೆಯಾಗಿತ್ತು ಎಂದು ರಾಮಲಿಂಗ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗ ರೆಡ್ಡಿ, ಈಗ ಮತ್ತೊಮ್ಮೆ ರವಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಕುರಿತ ಹೇಳಿಕೆ ನೀಡಿದ್ದಾರೆ. ಸರ್ಕಾರವನ್ನು ನಡೆಸಲು ಶ್ರಮಿಸುವ ಮಹಿಳಾ ಅಧಿಕಾರಿ ಅದರಲ್ಲೂ ಅತ್ಯುನ್ನತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವವರ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯವೂ ತೋರಲಿಲ್ಲ ಎಂದು ಅಕ್ಶರೋಶ ಹೊರಹಾಕಿದ್ದಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗಾದರೆ ಈ ರೀತಿ ಭಾಷೆ ಬಳಸುತ್ತೇವೆಯೇ ಎಂದು ಯೋಚಿಸುವ ಔದಾರ್ಯವೂ ಇಲ್ಲದಂತೆ ವರ್ತಿಸಿದ್ದಾರೆ. ಇವರು ‘ಹುಟ್ಟು ಗುಣ ಸುಟ್ಟರು ಹೋಗಲ್ಲ‌’ ಎಂಬ ಗಾದೆಗೆ ಅನ್ವರ್ಥ ಎಂಬಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿ.ಜೆ.ಪಿ, ಆರ್ ಎಸ್ ಎಸ್ , ವಿಶ್ವ ಹಿಂದೂ ಪರಿಷತ್ ನವರು ಅವರ ಪಕ್ಷದ ಪದಾಧಿಕಾರಿಗಳಿಗೆ/ ನಾಯಕರುಗಳಿಗೆ ನಾಲಿಗೆ ಬಿಗಿ ಹಿಡಿದು ಮಾತನಾಡುವುದಕ್ಮೆ ತರಬೇತಿ ನೀಡಲು ಮರೆತಿರಬೇಕು. ಅದರಲ್ಲೂ ಮಹಿಳೆಯರ ಕುರಿತು ಮಾತನಾಡುವಾಗ ಸೌಜನ್ಯ, ಸಂಸ್ಕೃತಿ, ಆಚಾರ ವಿಚಾರ ಯಾವುದೂ ಇಲ್ಲದೆ ಅನಾಗರೀಕ, ಅಪಾರ್ಥ‌ ಕಲ್ಪಿಸುವ ಭಾಷೆ ಬಳಸುವುದನ್ನು ಕಲಿಸಿರಬೇಕು ಎಂದಿರುವ ರಾಮಲಿಂಗ ರೆಡ್ಡಿ, ಮಾತು ಮಾತಿಗೆ ಭಾರತ ಮಾತೆಗೆ ಜೈಕಾರ ಹಾಕುವ ಇವರು ಬೂಟಾಟಿಕೆಯವರು, ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ ಭಾರತ ಮಾತೆಗೆ ನಾವು ಸಲ್ಲಿಸುವ ನಿಜವಾದ ಗೌರವ. ಆದರೆ ಇದನ್ನು ಬಿ.ಜೆ.ಪಿ ಅವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Related posts