ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ನಾಳೆ ಬೆಳಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಚುನಾವಣೆಯಲ್ಲಿ 16 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು 4,62,236 ಮತದಾರರಲ್ಲಿ 2,09,828(ಶೇ.45.48) ಮತದಾರು ಮತದಾನ ಮಾಡಿದ್ದಾರೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಆಯುಕ್ತರು ತಿಳಿಸಿದ್ದಾರೆ.
ಮತ ಎಣಿಕೆಯ ಸಿಬ್ಬಂದಿ 3 ವಿಧದಲ್ಲಿದ್ದು, ಪ್ರತಿ ಟೇಬಲ್ ಗೆ ಮೈಕ್ರೋ ಅಬ್ಸರ್ ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್ ಗಳನ್ನು ಬೆಳಗ್ಗೆ 7 ಗಂಟೆಗೆ ಬರಲು ತಿಳಿಸಲಾಗಿದೆ. ಯಾರಿಗೆ ಗುರುತಿನ ಚೀಟಿ ನೀಡಲಾಗಿದೆ ಅಂತಹವರಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುತ್ತದೆ. ಎಣಿಕೆ ಕಾರ್ಯವು 4 ಕೊಠಡಿಗಳಲ್ಲಿ 28 ಎಣಿಕಾ ಟೇಬಲ್ ಗಳನ್ನು ವ್ಯವಸ್ಥೆ ಮಾಡಿದ್ದು, ಹೆಚ್ಚುವರಿಯಾಗಿ 3 ಸಹಾಯಕ ಚುನಾವಣಾಧಿಕಾರಿಗಳನ್ನು ಎಣಿಕೆ ಕಾರ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಎಣಿಕೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 2 ಹಂತದ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿರುವ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರುವವರೆಗೆ ಯಾವ ಟೇಬಲ್ ನಲ್ಲಿ ಕೂರಲಿದ್ದೇವೆ ಎಂಬುದು ತಿಳಿದಿರುವುದಿಲ್ಲ. ನಾಳೆ ಬೆಳಗ್ಗೆ ಬಂದ ಬಳಿಕ ತಿಳಿಯಲಿದ್ದು, 7.45ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. 8ಕ್ಕೆ ಪೋಸ್ಟಲ್ ಬ್ಯಾಲೆಟ್ ಗಳ ಎಣಿಕೆ ಪ್ರಾರಂಭವಾಗಲಿದ್ದು, 8.30ಕ್ಕೆ ಇ.ವಿ.ಎಂ ಎಣಿಕೆ ಪ್ರಾರಂಭವಾಗಲಿದೆ. 25 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಅಲ್ಲದೆ ಚುನಾವಣಾ ಆಯೋಗದ ನಿರ್ದೇಶನದಂತೆ ಇ.ವಿ.ಎಂ ಎಣಿಕೆ ಮುಗಿದ ನಂತರ 1 ಮತಗಟ್ಟೆಯ ವಿ.ವಿ.ಪ್ಯಾಟ್ ಅನ್ನು ಚುನಾವಣಾ ವೀಕ್ಷಕರು ಆರಿಸಲಿದ್ದು, 4 ಮತಗಟ್ಟೆಗಳ ವಿ.ವಿ.ಪ್ಯಾಟ್ ಗಳನ್ನು ಚುನಾವಣಾ ಅಭ್ಯರ್ಥಿಗಳು ಆರಿಸಲಿದ್ದಾರೆ. ಆ 5 ಮತಗಟ್ಟೆಗಳ ವಿ.ವಿ.ಪ್ಯಾಟ್ ಗಳಲ್ಲಿರುವ ಸ್ಲಿಪ್ ಎಣಿಕೆ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.