ಎಚ್ಚರ..! ರಾಜ್ಯದಲ್ಲಿ ಮಾರಾಟವಾಗುತ್ತಿದೆ ಅವಧಿ ಮೀರಿದ ಮಕ್ಕಳ ತಿಂಡಿ

ಬೆಂಗಳೂರು: ರಾಜ್ಯದ ಹಲವೆಡೆ ಮಾರಾಟವಾಗುವ ಆಹಾರೋತ್ಪನ್ನಗಳು ಎಷ್ಟು ಸುರಕ್ಷೆ ಎಂಬ ಪ್ರಶ್ನೆ ಉದ್ಭವವಾಗಿದೆ. ಬೆಂಗಳೂರು-ಮಂಗಳೂರು ಸಹಿತ ರಾಜ್ಯದ ಹಲವೆಡೆ ನಿಷೇಧಿತ ಚೈನೀಸ್ ಸಾಲ್ಟ್ ಬಳಕೆ ಮಾಡಿರುವ ಆಹಾರ ಮಾರಾಟ ದಂಧೆ ಎಗ್ಗಿಲ್ಲದೆ ಸಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಬಹುತೇಕ ಹೊಟೇಲು ವ್ಯವಹಾರದ ಹೆಸರಲ್ಲಿ ನಡೆಯುತ್ತಿರುವ ಈ ಅಕ್ರಮದ ಬಗ್ಗೆ ಆಹಾರ ಇಲಾಖೆಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆಕ್ರೋಶ ಪ್ರಜ್ಞಾವಂತ ನಾಗರೀಕರದ್ದು.

ಇದೇ ವೇಳೆ, ಮಕ್ಕಳ ತಿಂಡಿಗಳ ಮಾರಾಟದಲ್ಲೂ ಅಕ್ರಮಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆ ಎಂಬಂತಿದೆ ನೆಲಮಂಗಲ ಸಮೀಪದ ಪ್ರಕರಣ. ನಿಗೂಢ ಮಾಫಿಯಾವು ಅವಧಿ ಮೀರಿದ ಮಕ್ಕಳ ತಿಂಡಿ ಪ್ಯಾಕೇಟ್​ಗಳಿಗೆ ಹೊಸ ಅವಧಿ ದಿನಾಂಕ ಮುದ್ರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಮಾದನಾಯಕನಹಳ್ಳಿ ಠಾಣಾ ಇನ್‌ಸ್ಪೆಕ್ಟರ್ ಮುರಳೀಧರ್ ನೇತೃತ್ವದ ಪೊಲೀಸರು ಬೇಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗೋಪಾಲಪುರ ವೇರ್​ಹೌಸ್​ನಲ್ಲಿ ಈ ದಂಧೆಯನ್ನು ಪತ್ತೆ ಮಾಡಿರುವ ಪೊಲೀಸರು ಹಲವರನ್ನು ಬಂಧಿಸಿ, ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

‘ನಕಲಿ’ ಮಾಫಿಯಾ ವಿರುದ್ಧ ತೊಡೆ ತಟ್ಟಿದ ‘ಮುರಳಿ’

ರಾಜಧಾನಿ ಸುತ್ತಮುತ್ತ ‘ನಕಲಿ’ಗಳ ಹಾವಳಿ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಮಾದನಾಯಕನಹಳ್ಳಿ ಠಾಣಾ ಇನ್‌ಸ್ಪೆಕ್ಟರ್ ಮುರಳೀಧರ್ ಅವರು ಮಾಹಿತಿ ಕಲೆಹಾಕಲು ತಂಡವೊಂದನ್ನು ಅಖಾಡಕ್ಕಿಳಿಸಿದ್ದರು. ಕೆಲ ಸಮಯದಿಂದ ನೆಲಮಂಗಲ ಸುತ್ತಮುತ್ತ ರಹಸ್ಯ ಮಾಹಿತಿ ಕಲೆಹಾಕಿದ ಪೊಲೀಸರು ‘ನಕಲಿ’ ದಂಧೆಯ ರೂವಾರಿಗಳ ರಹಸ್ಯವನ್ನೂ ಬೇಧಿಸಿದ್ದಾರೆ. ಶುಕ್ರವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಮುರಳೀಧರ್ ನೇತೃತ್ವದ ಪೊಲೀಸರು ‘ನಕಲಿ’ ಮಾಫಿಯಾದ ಪ್ರಮುಖರೂ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರಷ್ಟೇ ಅಲ್ಲ, ಈ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳೂ ಭಾಗಿಯಾಗಿದ್ದರಿಂದ ಈ ‘ನಕಲಿ’ ದಂಧೆ ಬಗ್ಗೆ ಆಹಾರ ಇಲಾಖೆಗೂ ಸ್ಪಷ್ಟ ಅರಿವಾದಂತಾಗಿದೆ.

ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಸಮೀಪದ ಗೋಡೌನ್​ ಮೇಲೆ ಪೊಲೀಸರು ದಾಳಿ ನಡೆಸಿದಾಗ ಈ ‘ನಕಲಿಯ’ ಅನಾವರಣವಾಗಿದೆ. ಖದೀಮರ ತಂಡ ನೆಲಮಂಗಲ ಹೊರವಲಯದಲ್ಲಿ ಆರು ತಿಂಗಳ ಹಿಂದೆ ಗೋಡೌನ್ ಬಾಡಿಗೆಗೆ ಪಡೆದು ಈ ದಂಧೆ ನಡೆಸುತ್ತಿತ್ತು. ಈ ಮಾಫಿಯಾ ತಂಡ ವಿವಿದೆಡೆಯಿಂದ ಅವಧಿ ಮೀರಿದ ಆಹಾರ ಪ್ಯಾಕೇಟ್ ತರಿಸಿಕೊಂಡು ಅದರಲ್ಲಿನ ಎಕ್ಸ್​ಪೈರ್ ಡೇಟ್ ಅಳಿಸಿ ಹೊಸ ದಿನಾಂಕವನ್ನು ಮುದ್ರಣ ಮಾಡುತ್ತಿತ್ತು. ಥಿನ್ನರ್ ಹಾಗೂ ಕೆಮಿಕಲ್ ಸಹಾಯದಿಂದ ಎಕ್ಸ್​ಪೈರ್ ಡೇಟ್ ಅಳಿಸಿ ಹೊಸ ದಿನಾಂಕವನ್ನು ಮುದ್ರಣ ಮಾಡುತ್ತಿತ್ತು ಎನ್ನಲಾಗಿದೆ.

ಮಾಹಿತಿದಾರರು ನೀಡಿದ ಸುಳಿವನ್ನಾಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ನಕಲಿ ದಂಧೆಯ ರೋವಾರಿಗಳೆನ್ನಲಾದ ವೆಂಕಟೇಶ್ ಸೇರಿದಂತೆ ನಾಲ್ವರನ್ನು ಬಂಧಿಸಿ, ಕೋಟ್ಯಂತರ ಮೌಲ್ಯದ ಆಹಾರ ಸಾಮಾಗ್ರಿಗಳು, ಧಿನ್ನರ್ ಹಾಗೂ ಕೆಮಿಕಲ್​ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ 15 ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು ಅವರಿಗಾಗಿ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್.ರವಿಕಾಂತೇಗೌಡರು ಕೇಂದ್ರ ವಲಯ ಐಜಿಪಿಯಾಗಿ ನಿಯುಕ್ತಿಯಾದ ನಂತರ ‘ನಕಲಿ’ಗಳ ವಿರುದ್ದದ ಕಾರ್ಯಾಚರಣೆಗೆ ವೇಗ ಸಿಕ್ಕಿದೆ. ಅವರ ಕಾರ್ಯವ್ಯಾಪ್ತಿಯಲ್ಲೇ ಬರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆ ಸಂಚಲನ ಸೃಷ್ಟಿಸಿದೆ.

ಬಿ.ಆರ್.ರವಿಕಾಂತೇಗೌಡರು ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಉಪ ಪೊಲೀಸ್ ಆಯುಕ್ತರಾಗಿದ್ದಾಗ ಕುಖ್ಯಾತ ‘ಕಮರಿಪೇಟೆ’ ಹಾವಳಿಗೆ ಬ್ರೇಕ್ ಹಾಕಿದ್ದರು. ದಕ್ಷಿಣ ಭಾರತದ ನಕಲಿ ಮದ್ಯ ತಯಾರಿಕಾ ಅಡ್ಡೆಯಾಗಿದ್ದ ‘ಕಮರಿಪೇಟೆ’ ಮೇಲೆ ನಿಯಂತ್ರಣ ಸಾಧಿಸುವುದು ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಆ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿ ಅಧಿಕಾರವಹಿಸಿಕೊಂಡ ಬಿ.ಆರ್.ರವಿಕಾಂತೇಗೌಡ ಅವರು ನಿಷ್ಟೂರ ಕಾರ್ಯಾಚರಣೆ ನಡೆಸಿ, ನಕಲಿ ಮದ್ಯದ ಕುಳಗಳನ್ನು ಮಟ್ಟಹಾಕಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದರು.

ಇದೀಗ ರವಿಕಾಂತೇಗೌಡರು ಕೇಂದ್ರ ವಲಯ ಐಜಿಪಿಯಾಗಿದ್ದು ರಾಜಧಾನಿ ಬೆಂಗಳೂರು ಸೆರಗಿನಲ್ಲಿಅವಿತಿರುವ ‘ನಕಲಿ’ಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ. ಅವರ ಕಾರ್ಯವ್ಯಾಪ್ತಿಯಲ್ಲೇ ಬರುವ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆ ಸಂಚಲನ ಸೃಷ್ಟಿಸಿದೆ.

Related posts