ಬೆಂಗಳೂರು: ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರನ್ನಾಗಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
1996 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಸೀಮಂತ್ ಕುಮಾರ್ ಸಿಂಗ್ ಕ್ಷಿಪ್ರ ಕಾರ್ಯಾಚರಣೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಟ್ರಬಲ್ ಶೂಟರ್ ಎಂದೇ ಗುರುತಾಗಿದ್ದಾರೆ.
ಮಂಗಳೂರು ನಗರ ಕಮೀಷನರೇಟ್ ಆದಾಗ ಮೊದಲ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಸೀಮಂತ್ ಕುಮಾರ್ ಸಿಂಗ್, ಈ ಹಿಂದೆ ಬೆಂಗಳೂರು ಪೂರ್ವ ವಲಯ ಹೆಚ್ಚುವರಿ ಆಯುಕ್ತರಾಗಿ, ನಕ್ಸಲ್ ನಿಗ್ರಹ ಪಡೆ (ANF)ನ ಕಮಾಂಡರ್ ಆಗಿ, ಎಸಿಬಿ ಎಡಿಜಿಪಿಯಾಗಿ, ಕೆಎಸ್ಆರ್ ಪಿ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸಕ್ತ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಎಡಿಜಿಪಿಯಾಗಿರುವ ಸೀಮಂತ್ ಕುಮಾರ್ ಸಿಂಗ್ ಅವರನ್ನು ಇದೀಗ ಬೆಂಗಳೂರಿನ ನೂತನ ಕಮಿಷನರ್ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.