ಶಿವಮೊಗ್ಗ: ಗೃಹ ಸಚಿವ ಅರಗ ಜ್ಞಾನೇಂದ್ರರ ತವರು ಇದೀಗ ಅಚ್ಚರಿಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿವೆ. ಜಾತ್ರಾ ಮಹೋತ್ಸವಗಳಲ್ಲಿ ಸ್ಥಳೀಯ ಜನನಾಯಕ ಅರಗ ಜ್ಞಾನೇಂದ್ರರ ಹೆಸರಲ್ಲಿ ದೇವರಿಗೆ ಫಲ-ಪುಷ್ಪ ಸಮರ್ಪಣೆಯ ಕೈಂಕರ್ಯವು ವಿಶೇಷ ಎಂಬಂತೆ ಕಂಡುಬರುತ್ತಿದೆ.
ಶಿವಮೊಗ್ಗ ಜಿಲ್ಲೆಯ ಜಾತ್ರಾ ಮಹೋತ್ಸವ ವೇಳೆ ಹಣ್ಣುಗಳ ಮೇಲೆ ಅರಗ ಜ್ಞಾನೇಂದ್ರರ ಹೆಸರನ್ನು ಬರೆದು ದೇವರಿಗೆ ಸಮರ್ಪಿಸುವ ಬೆಂಬಲಿಗರ ನಡೆ ಅಚ್ಚರಿಗೆ ಕಾರಣವಾಗಿದೆ.
ಹುರುಳಿ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಆರಗ ಜ್ಞಾನೇಂದ್ರರವರ ಬೆಂಬಲಿಗರ ಪರವಾಗಿ ಕ್ಷೇತ್ರದ ವ್ಯಕ್ತಿಯೊಬ್ಬರು ರಥದ ಕಲಶಕ್ಕೆ ಫಲ ಬೀರುವ ಮೂಲಕ ಅಪರೂಪದ ಸನ್ನಿವೇಶಕ್ಕೆ ಕಾರಣರಾದರು.
ಇನ್ನೊಂದೆಡೆ, ಮೇಳಿಗೆಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲೂ ಅಂಥದ್ದೇ ಪ್ರಸಂಗ ಕಂಡುಬಂತು. ಸಚಿವ ಆರಗ ಜ್ಞಾನೇಂದ್ರರ ಹೆಸರನ್ನು ಬಾಳೆಹಣ್ಣಿನಲ್ಲಿ ಬರೆದು, ಅದನ್ನು ರಥಕ್ಕೆ ಸಮರ್ಪಿಸುವ ಮೂಲಕ ಸಚಿವ ಬೆಂಬಲಿಗರೊಬ್ಬ ಕುತೂಹಲದ ಕೇಂದ್ರಬಿಂದುವಾದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು ಸಚಿವ ಅರಗ ಜ್ಞಾನೇಂದ್ರ ಅವರು ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ದೇವರು ಮತ್ತಷ್ಟು ಶಕ್ತಿ ಕೊಡಲಿ ಎಂದು ಬೆಂಬಲಿಗರು ಪ್ರಾರ್ಥಿಸುತ್ತಿದ್ದಾರೆ ಎಂದರು. ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ‘ಮತ್ತೊಮ್ಮೆ ಆರಗ’ ಎಂಬ ಅಭಿಯಾನ ಕೈಗೊಂಡಿರುವಂತೆಯೇ ಮತ್ತಷ್ಟು ಮಂದಿ ಈ ರೀತಿಯಾಗಿ ದೇವರ ಮೊರೆ ಹೋಗಿರುವುದು ಈ ಕ್ಷೇತ್ರದ್ದೇ ಆದ ಬೆಳವಣಿಗೆಯಾಗಿದೆ.