KSRTC: ಶ್ರಾವಣದಲ್ಲಿ ಪರಿಪೂರ್ಣ ಸಂಬಳ ಸಂಭ್ರಮ.. ಹೆಚ್ಚಿದ ‘ಹಬ್ಬಗಳ ತಯಾರಿ’ ಸಡಗರ..

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ KSRTC ಇದೀಗ ಆರ್ಥಿಕ ಚೇತರಿಕೆಯತ್ತ ಸಾಗಿದೆ. ಕಾಂಗ್ರೆಸ್ ಗ್ಯಾರೆಂಟಿ ‘ಶಕ್ತಿ’ ಯೋಜನೆಯಾಗಿ ಜಾರಿಯಾದ ನಂತರ ಕೆಸ್ಸಾರ್ಟಿಸಿ ನಿಗಮಕ್ಕೂ ಬಲ ಬಂದಿದ್ದು ನೌಕರರ ಪಾಲಯದಲ್ಲೂ ಸಂತಸ ಮನೆಮಾಡಿದೆ. ಇದಕ್ಕೆ ಕಾರಣವಾಗಿರೋದು ಸಕಾಲದ ಸಂಬಳ. KSRTC ನೌಕರರಿಗೆ ಮಂಗಳವಾರ (ಆಗಸ್ಟ್ 1ರಂದು) ಪರಿಪೂರ್ಣ ವೇತನ ಪಾವತಿಯಾಗಿದ್ದು, ಹಬ್ಬಗಳ ಮಾಸ ಶ್ರಾವಣ ಸಂಭ್ರಮ ದುಪ್ಪಟ್ಟಾಗಿದೆ.

ಬೊಮ್ಮಾಯಿ ಹುಸಿ ಬಾಂಬ್:

KSRTC ಪರಿಸ್ಥಿತಿ ಬಗ್ಗೆ ಆತುರದಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಬಸವರಾಜ್ ಬೊಮ್ಮಾಯಿ, ಶಕ್ತಿ ಯೋಜನೆ ಫಲಶೃತಿ ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡಲಾಗಿದೆ ಎಂದು ಟೀಕಿಸಿದ್ದರು. ಈ ಟ್ವೀಟ್ ಮಾಡಿರುವ ಅವರು, ‘ಮೊದಲ ತಿಂಗಳಿನಿಂದಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆಯನ್ನು ಎಳೆದಿದೆ. ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಮೊದಲನೇ ತಿಂಗಳು ಹುಸಿಯಾಗಿದೆ ಎಂದಿದ್ದಾರೆ. ಬರುವಂತ ದಿನಗಳಲ್ಲಿ ಸಾರಿಗೆ ನಿಗಮಗಳು ಬಸ್ ಗಳನ್ನು ಡಿಸೆಲ್ ಇಲ್ಲದೆ ನಿಲ್ಲಿಸುವಂತದ್ದು ಸಾರಿಗೆ ನೌಕರರು ಸಂಬಳ ಇಲ್ಲದೆ ದುಡಿಯುವಂತದ್ದು, ಕೆಟ್ಟ ಬಸ್ ಗಳು ರಸ್ತೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ ಈ ಬೆಳವಣಿಗೆಯನ್ನು ಅಲ್ಲಗಳೆದಿರುವ KSRTC ಅಧಿಕಾರಿಗಳು, ಸಮಸ್ತ ನೌಕರರಿಗೆ ಎಂದಿನಂತೆ 01.08.2023ರಂದು ಪೂರ್ಣ ಪ್ರಮಾಣದಲ್ಲಿ ವೇತನ ಪಾವತಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನೌಕರರ ಸಂತಸ:

ಈ ಹಿಂದೆ KSRTC ಸಿಬ್ಬಂದಿಗೆ ಅರ್ಧ ಮಾತ್ರ ವೇತನ ಪಾವತಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಬಾರಿ, ಅರ್ಧ ಪ್ರಮಾಣದ ವೇತನವಲ್ಲ, ಪೂರ್ಣ ಪ್ರಮಾಣದ ವೇತನ ಪಾವತಿಯಾಗಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು, ಮಾಹಿತಿ ಹಂಚಿಕೊಂಡಿದ್ದಾರೆ.

ಸಾರಿಗೆ ಸಂಸ್ಥೆಯ ನಿಗಮಗಳ ನೌಕರರಿಗೆ ಮಂಗಳವಾರವೇ ವೇತನ ಪಾವತಿ ಮಾಡಲಾಗಿದೆ. ಕೇವಲ ಅರ್ಧ ಮಾತ್ರ ವೇತನ ನೀಡಲಾಗಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ. ಈ ಬಾರಿ ಪರಿಪೂರ್ಣ ಮೊತ್ತದಲ್ಲಿ ವೇತನ ಪಾವತಿಯಾಗಿದೆ ಎಂದು ನೌಕರರೂ ಸಂತಸ ಹಂಚಿಕೊಂಡಿದ್ದಾರೆ.

Related posts