ಸಿಂಗಾಪೂರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇದೀಗ ಏಷ್ಯಾದಲ್ಲೇ ಅತ್ತುತ್ತಮ ಸಾರಿಗೆ ಸಂಸ್ಥೆ. ಅತ್ಯುತ್ತಮ ಸೇವೆ, ನಿರ್ವಹಣೆಗೆ ಹೆಸರಾಗಿರುವ ಕರ್ನಾಟಕ ಸರ್ಕಾರಿ ಸ್ವಾಮ್ಯದ KSRTCಗೆ ಏಷ್ಯಾದ ‘ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ-2023’ ಸಿಕ್ಕಿದೆ.
ಸಿಂಗಾಪೂರದಲ್ಲಿ ಇಂದು (ಗುರುವಾರ) ನಡೆದ ಅನನ್ಯ ಸಮಾರಂಭ ಜಾಗತಿಕ ಗಮನಸೆಳೆಯಿತು. ಅದ್ಧೂರಿ ಸಮಾರಂಭದಲ್ಲಿ ಜಾಗತಿಕ ಉದ್ಯಮ ದಿಗ್ಗಜರ ಉಪಸ್ಥಿತಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
17.08.2023ರಂದು ಸಿಂಗಾಪುರ್ನಲ್ಲಿ World Sustainability Congress ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ‘ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್’ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಯನ್ನು ಘೋಷಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆ ಮಾಡಿರುವ ತೀರ್ಪುಗಾರರು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ KSRTC ಬಗ್ಗೆ ಕೊಂಡಾಡಿದರು. ಹಲವು ಸುತ್ತುಗಳ ಪ್ರಕ್ರಿಯೆಯ ನಂತರ ಅತ್ಯುತ್ತಮ ಉದ್ಯೋಗದಾತ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ಘೋಷಿಸಿದರು.
ಸಿಂಗಾಪೂರ್ನಲ್ಲಿ World Sustainability Congress ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಉದ್ಯಮಿಗಳು ಭಾಗಿಯಾಗಿದ್ದರು.
ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯನ್ನು ಅಸೋಸಿಯೇಷನ್ ಆಫ್ ಇಂಟರ್ ನ್ಯಾಷನಲ್ ಸರ್ಟಿಪೈಡ್ ಪ್ರೋಫೆಶನಲ್ ಅಕೌಂಟೆಂಟ್ಸ್ ಹಾಗೂ ಅಟಾರ್ನಿ ಇದರ ಕಂಟ್ರಿ ಮ್ಯಾನೇಜರ್ ವಿಲ್ಬರ್ ಎನ್.ಜಿ., ಸೋಷಿಯಲ್ ಮತ್ತು ಗೌರ್ನನ್ಸ್ ಅಫೀಸರ್, ಕಂಪ್ಲಯನ್ಸ್ ಮತ್ತು ಡಾಟಾ ಪ್ರೈವೆಸಿ ಅಧಿಕಾರಿಗಳು ಈ ಪ್ರತಿಷ್ಠಿತ ಪುರಸ್ಕಾರವನ್ನು ಪ್ರದಾನ ಮಾಡಿದರು. KSRTC ಪರವಾಗಿ ಭಾಗವಹಿಸಿದ್ದ ನಿಗಮದ ಮುಖ್ಯ ಲೆಕ್ಕಾಧಿಕಾರಿ ಮಂಜುಳ ನಾಯ್ಕ್ ಹಾಗೂ KSRTC ಮಂಡಳಿ ಕಾರ್ಯದರ್ಶಿಯೂ ಆದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಅವರು ಈ ಪ್ರಶಸ್ತಿ ಸ್ವೀಕರಿಸಿದರು.