ಬೆಂಗಳೂರು: ಕೇಂದ್ರ ಸರ್ಕಾರ 2025–26ರ ಹಣಕಾಸು ವರ್ಷದ ಮಧ್ಯದಲ್ಲಿ ಜಾರಿಗೆ ತಂದ SNA–SPARSH ಪಾವತಿ ವ್ಯವಸ್ಥೆ ನವೀಕರಣದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಿಬ್ಬಂದಿಗೆ ಎರಡು ತಿಂಗಳ ಕಾಲ ವೇತನ ಪಾವತಿ ವಿಳಂಬವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾವತಿ ಪ್ರಕ್ರಿಯೆ ಮತ್ತು ತಾಂತ್ರಿಕ ವ್ಯವಸ್ಥೆಗಳಲ್ಲಿ ಬದಲಾವಣೆ ಹಾಗೂ ಮರುಹೊಂದಾಣಿಕೆ ಅಗತ್ಯವಾಯಿತು. ಈ ವ್ಯವಸ್ಥೆಯಡಿಯಲ್ಲಿ ಕೇಂದ್ರ ಸರ್ಕಾರದ ಅನುದಾನ ಬಂದ ನಂತರವೇ ರಾಜ್ಯ ಸರ್ಕಾರದಿಂದ ವೇತನ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿತ್ತು. ಇದರಿಂದ ಪಾವತಿಯಲ್ಲಿ ಅಡಚಣೆ ಉಂಟಾಯಿತು ಎಂದು ಅವರು ತಿಳಿಸಿದ್ದಾರೆ.
ವೇತನ ಪಾವತಿಗಾಗಿ ಕೇಂದ್ರ ಸರ್ಕಾರವು ಜನವರಿ 8, 2026ರಂದು ₹175.75 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಮೊತ್ತವನ್ನು ಇದೀಗ ಹಂತ ಹಂತವಾಗಿ ಜಿಲ್ಲೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಮುಂದಿನ ದಿನಗಳಲ್ಲಿ ಕೇಂದ್ರದಿಂದ ಅನುದಾನ ಯಾವಾಗ ಬರುತ್ತದೆ ಎಂಬುದನ್ನು ಪರಿಗಣಿಸದೇ, ರಾಜ್ಯ ಸರ್ಕಾರವೇ ಆರೋಗ್ಯ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಗೆ ಮೊದಲ ಆದ್ಯತೆ ನೀಡಲಿದೆ. ಇಂತಹ ವಿಳಂಬಗಳು ಮರುಕಳಿಸದಂತೆ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
