ಬೆಂಗಳೂರು : ಸರ್ಕಾರದ ಪ್ರಮಾಣಿಕ ಪ್ರಯತ್ನಗಳ ಜತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಜೆಎಸ್ಎಸ್ ಸಂಸ್ಥೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಜಿಯವರ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ʼಕೋವಿಡ್-೧೯ : ಸವಾಲು ಮತ್ತು ನಿರ್ವಹಣೆ ʼ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಸಚಿವರು ಮಾತನಾಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಮಾನವೀಯ ನೆಲೆಯಲ್ಲಿ ಬಡವ-ಶ್ರೀಮಂತ, ಹಿರಿಯರು-ಕಿರಿಯರು ಬೇಧವಿಲ್ಲದೆ ಸಮಭಾವದಿಂದ ಎಲ್ಲರಿಗೂ ಗುಣಮಟ್ಟದ ಕೋವಿಡ್ ಚಿಕಿತ್ಸೆ ನೀಡುತ್ತಿವೆ. ಅದರಲ್ಲೂ ರೋಗಕ್ಕೆ ತುತ್ತಾಗುವ ಅವಕಾಶಗಳಿರುವ ಮಕ್ಕಳು ಮತ್ತು ಹಿರಿಯರ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಿದೆ. ಕೆಲ ಮುಂದುವರಿದ ರಾಷ್ಟ್ರಗಳು ತಮ್ಮದೇ ಕಾರಣಗಳಿಂದ ರೋಗಪೀಡಿತರಾದ ಹಿರಿಯ ನಾಗರಿಕರಿಗೆ ಚಿಕಿತ್ಸೆ ನಿರಾಕರಿಸಿದ ಉದಾಹರಣೆಗಳಿವೆ. ಅಂತಹ ಯಾವುದೇ ತಾರತಮ್ಯ ನಮ್ಮಲ್ಲಿ ಮಾಡಿಲ್ಲ ಎಂದರು.
ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಸಾವಿನ ಪ್ರಮಾಣ ಶೇಕಡಾ ೪ ಮತ್ತು ಅದಕ್ಕಿಂತ ಹೆಚ್ಚು ಇದ್ದರೆ ಭಾರತದಲ್ಲಿ ಶೇ.1.5 ರಿಂದ 1.7 ರಷ್ಟಿರುವುದು ಸಮಾಧಾನಕರ ಸಂಗತಿ. ಇದನ್ನು ಶೇಕಡಾ ೧ಕ್ಕಿಂತ ಕಡಿಮೆ ಮಾಡುವ ಉದ್ದೇಶದಿಂದ ಯತ್ನಗಳನ್ನು ಮುಂದುವರಿಸಲಾಗಿದೆ. ಇದು ಯುದ್ಧದ ಸಮಯ. ಈ ಹೋರಾಟದಲ್ಲಿ ಸರ್ಕಾರದಿಂದ ಮಾತ್ರ ಸಂಪೂರ್ಣ ನಿಗ್ರಹ ಸಾಧ್ಯವಿಲ್ಲ. ಸಮಾಜದಲ್ಲಿನ ಎಲ್ಲ ಸಂಘ-ಸಂಸ್ಥೆಗಳ ಜತೆ ಪ್ರತಿಯೊಬ್ಬ ನಾಗರೀಕರು ತಮ್ಮ ಜವಾಬ್ದಾರಿಗಳನ್ನು ಅರಿತು ಈ ಸಮಯದಲ್ಲಿ ಸಾಮಾಜಿಕ ಪ್ರಜ್ಞೆ ಮೆರೆಯಬೇಕಿದೆ ಎಂದರು.
ಜಮ್ಮು ಕಾಶ್ಮೀರದ ಲೆಪ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಇನ್ಫೊಸಿಸ್ ಫೌಂಡೇಶನ್ನಿನ ಮುಖ್ಯಸ್ಥೆ ಸುಧಾಮೂರ್ತಿ, ಚಿತ್ರನಟ ದರ್ಶನ್, ಜೆಎಸ್ಎಸ್ ಸಂಸ್ಥೆಗಳ ಸಮ ಕುಲಾಧಿಪತಿ ಡಾ. ಸುರೇಶ್ ಭೋಜರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.