ನವದೆಹಲಿ: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್’ನಲ್ಲಿ ಜಾಮೀನು ಸಿಗದ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ಸೋಮವಾರ ವಿಚಾರಣೆಗೆ ಬಂದಿದ್ದು ನ್ಯಾಯಪೀಠವು ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ. ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ತಮ್ಮ ಕಕ್ಷಿದಾರರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ವರ್ಚಸ್ಸಿಗೆ ಧಕ್ಕೆ ತರಲು ಅತ್ಯಾಚಾರ ಆರೋಪ ಮಾಡಲಾಗಿದೆ ಎಂದು ವಾದಿಸಿದರು. ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ನೀಡುವಂತೆ ಮನವಿ ಮಾಡಿದರಾದರೂ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ, ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.